12ನೇ ತರಗತಿ ತನಕ ಶಿಕ್ಷಣ ಪಡೆದಿರುವ ಬಿಹಾರ ಉಪ ಮುಖ್ಯಮಂತ್ರಿಗೆ ಹಣಕಾಸು ಸಹಿತ ಆರು ಪ್ರಮುಖ ಖಾತೆಗಳು!
ನೇಮಕಾತಿ ಹಗರಣದ ಆರೋಪಿಗೆ ಶಿಕ್ಷಣ ಖಾತೆ

ಪಾಟ್ನಾ : ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮತ್ತೆ ಅಧಿಕಾರ ಸ್ವೀಕರಿಸಿದ ನಂತರ ನಡೆದ ಪ್ರಥಮ ಸಂಪುಟ ಸಭೆಯಲ್ಲಿ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಗೃಹ ಖಾತೆ ಸಹಿತ ಹಲವು ಖಾತೆಗಳನ್ನು ತಮ್ಮ ಬಳಿಯೇ ಸಿಎಂ ಉಳಿಸಿಕೊಂಡಿದ್ದರೆ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಅವರಿಗೆ ಪ್ರಮುಖ ಹಣಕಾಸು ಖಾತೆ ಸಹಿತ ಬರೋಬ್ಬರಿ ಆರು ಖಾತೆಗಳನ್ನು ವಹಿಸಲಾಗಿದೆ. ಈ ಹಿಂದೆ ವಿತ್ತ ಖಾತೆ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿರ್ವಹಿಸುತ್ತಿದ್ದರು.
ಆದರೆ ಮೊದಲ ಬಾರಿ ಸಚಿವರಾಗಿರುವ ಅದೂ 12ನೇ ತರಗತಿ ತನಕ ಶಿಕ್ಷಣ ಪಡೆದಿರುವ ತಾರಕಿಶೋರ್ ಪ್ರಸಾದ್ ಅವರಿಗೆ ವಿತ್ತ ಖಾತೆ ಸಹಿತ ಇತರ ಪ್ರಮುಖ ಖಾತೆಗಳಾದ ವಾಣಿಜ್ಯ, ಪರಿಸರ, ಅರಣ್ಯ ಮತ್ತು ಹವಾಮಾನ, ಐಟಿ, ವಿಪತ್ತು ನಿರ್ವಹಣೆ, ನಗರಾಭಿವೃದ್ಧಿ ಮತ್ತು ವಸತಿ ಖಾತೆಗಳನ್ನೂ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ನೇಮಕಾತಿ ಹಗರಣದ ಆರೋಪಿ ಮೆವಾಲಾಲ್ ಚೌಧರಿ ನಿತೀಶ್ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ. 2015ರಲ್ಲಿ ಮೊದಲ ಬಾರಿ ಜೆಡಿಯು ಶಾಸಕನಾಗಿದ್ದ ಚೌಧರಿ ಅದಕ್ಕೂ ಮೊದಲು ಶಿಕ್ಷಕನಾಗಿದ್ದರು. ಇವರ ವಿರುದ್ಧ ಸಬೌರ್ ಕೃಷಿ ವಿವಿಯಲ್ಲಿ ನೇಮಕಾತಿ ಹಗರಣ ನಡೆಸಿರುವ ಆರೋಪವಿದೆ. 2017ರಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಚೌಧರಿ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಆರ್ ಜೆಡಿ ನಾಯಕ ಹಾಗೂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿದ್ದ ತೇಜಸ್ವಿ ಯಾದವ್ ಅವರ ಶೈಕ್ಷಣಿಕ ಅರ್ಹತೆಗಳನ್ನು ಪ್ರಶ್ನಿಸಿದ್ದ ಎನ್‍ಡಿಎ ಪಾಳಯ ಈಗ 12ನೇ ತರಗತಿ ತನಕ ಶಿಕ್ಷಣ ಪಡೆದಿರುವ ಉಪಮುಖ್ಯಮಂತ್ರಿಗೆ ಇಷ್ಟೊಂದು ಮಹತ್ವದ ಖಾತೆಗಳನ್ನು ನೀಡಿದೆ. ಈ ಕುರಿತು ಆರ್ ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಪ್ರಶ್ನಿಸಿದ್ದಾರೆ.







