ಪಿಎಚ್‌ಡಿ, ಎಂಫಿಲ್ ಫೆಲೋಷಿಪ್ ಕಡಿತ ವಿರೋಧಿಸಿ ಆಂದೋಲನ ಆರಂಭಿಸಿದ ಸಿಎಫ್ಐ

ಶಿವಮೊಗ್ಗ,ನ.18: ಸ್ಕಾಲರ್‌ಶಿಪ್ ಮಂಜೂರಾತಿಯಲ್ಲಿ ವಿಳಂಬ ಮತ್ತು ಅವ್ಯವಸ್ಥೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಹೆಚ್‌ಡಿ, ಎಂಫಿಲ್ ಫೆಲೋಷಿಪ್ ಕಡಿತಗೊಳಿಸಿರುವುದನ್ನು ವಿರೋಧಿಸಿ ಸ್ಕಾಲರ್‌ಶಿಫ್ ಕೊಡಿ ವಿದ್ಯಾರ್ಥಿ ಆಂದೋಲನವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಹಮ್ಮಿಕೊಂಡಿದೆ.
ಪ್ರತಿ ಬಾರಿ ಸರ್ಕಾರ ಮತ್ತು ಅಲ್ಪಸಂಖ್ಯಾತ ಇಲಾಖೆಯ ಸ್ಕಾಲರ್‌ಶಿಪ್ ವಿಚಾರದಲ್ಲಿ ನಡೆಸಿಕೊಂಡು ಬರುವುದರಲ್ಲಿ ವಿಫಲವಾಗುತ್ತಿದ್ದು, ಇದು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮೇಲೆ ಸರ್ಕಾರಕ್ಕಿರುವ ಬೇಜವಾಬ್ದಾರಿತನವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯ ಕಾರ್ಯದರ್ಶಿ ಅಶ್ವಾನ್ ಸಾದಿಕ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಎರಡು ಮೂರು ವರ್ಷಗಳಿಂದ ಅರ್ಜಿ ಹಾಕಿರುವ ವಿದ್ಯಾರ್ಥಿಗಳ ಅಲ್ಪಸಂಖ್ಯಾತ ಇಲಾಖೆ ಕ್ಷುಲ್ಲಕ ಕಾರಣ ಹೇಳಿ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿ ಇಟ್ಟುಕೊಂಡಿದೆ. ಸ್ಕಾಲರ್‌ಶಿಪ್ ಮಂಜೂರಾದ ಕೆಲವರಿಗೆ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ಈ ಬಗ್ಗೆ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಕನಿಷ್ಠ ಅಲ್ಪಸಂಖ್ಯಾತ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿಲ್ಲ. ಅರ್ಜಿ ಹಾಕುವ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿಲ್ಲ. ಇದರಿಂದ ಪ್ರತಿ ವರ್ಷ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಇನ್ನೇನು ಆರಂಭಗೊಳ್ಳಲಿವೆ. ಕೊರೋನ ಪರಿಣಾಮ ಜನರ ಆರ್ಥಿಕ ಸ್ಥಿತಿಗತಿ ತೀರಾ ಹದಗೆಟ್ಟಿರುವುದರಿಂದ ಪೋಷಕರು ತಮ್ಮ ಮಕ್ಕಳ ಪ್ರವೇಶಾತಿ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳು ಕೂಡ ಪ್ರವೇಶಶುಲ್ಕ ಹೆಚ್ಚಿಸಿರುವುದಲ್ಲದೇ ಒಂದೇ ಕಂತಿನಲ್ಲಿ ಎಲ್ಲ ಶುಲ್ಕವನ್ನು ಪಾವತಿಸಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಿವೆ ಎಂದು ದೂರಿದರು.
ಸರ್ಕಾರವು ಕೂಡ ಈ ಬಗ್ಗೆ ಒಂದು ಮಾರ್ಗಸೂಚಿ ತರಲು ವಿಫಲವಾಗಿರುವುದು ವಿಪರ್ಯಾಸವೇ ಸರಿ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರೆಸಲು ಸ್ಕಾಲರ್ಶಿಪ್‌ಗೆ ಅವಲಂಬಿತರಾಗಿದ್ದಾರೆ. ಆದರೆ ಸ್ಕಾಲರ್‌ಶಿಪ್‌ನಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ರಾಜ್ಯದ ಹಲವು ವಿದ್ಯಾರ್ಥಿಗಳು ಆಂತಕಕ್ಕೊಳಗಾಗಿದ್ದಾರೆ ಎಂದರು.
ಅಲ್ಪಸಂಖ್ಯಾತ ಇಲಾಖೆಯಿಂದ ಪಿಹೆಚ್‌ಡಿ ಮತ್ತು ಎಂಫಿಲ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ರೂ.ಪ್ರೋತ್ಸಾಹ ಧನ ಹಾಗೂ 10 ಸಾವಿರ ರೂ.ನಿರ್ವಹಣಾ ವೆಚ್ಚ ನೀಡುತ್ತಿತ್ತು. ಆದರೆ ಸರ್ಕಾರ ದಿಢೀರನೇ ಆದೇಶ ಹೊರಡಿಸಿ ಪ್ರೋತ್ಸಾಹಧನವನ್ನು 10 ಸಾವಿರಕ್ಕೆ ಇಳಿಸಿ ಹಾಗೂ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹಿಂತೆಗೆದುಕೊಂಡಿದೆ. ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಕೊಂಡು ಇದಕ್ಕೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ರಾಜ್ಯ ಸಮಿತಿಯು ರಾಜ್ಯಾದ್ಯಂತ ಸ್ಕಾಲರ್‌ಶಿಪ್ ಕೊಡಿ ಎಂಬ ಘೋಷಣೆಯೊಂದಿಗೆ ಆಂದೋಲನವನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಹಮ್ಮಿಕೊಂಡಿದೆ. ನ.24ರಂದು ಬೆಂಗಳೂರಿನ ಅಲ್ಪಸಂಖ್ಯಾತ ಇಲಾಖೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಹಾರ ಸಿಗದಿದ್ದಲ್ಲಿ ವಿವಿಧ ರೀತಿಯ ಹೋರಾಟ ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶ್ರಫ್ ದಾವಣಗೆರೆ, ಮುಜಾವಿದ್ ಪಾಷ ಉಪಸ್ಥಿತರಿದ್ದರು.







