'ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು' ಎಂಬ ಅಜಿತ್ ಪವಾರ್ ಹೇಳಿಕೆಗೆ ವ್ಯಾಪಕ ಆಕ್ರೋಶ
ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಮಹಾರಾಷ್ಟ್ರ ಡಿಸಿಎಂ

ಬೆಂಗಳೂರು, ನ. 18: ರಾಜ್ಯ ಸರಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, 50 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿರುವ ಬೆನ್ನಲ್ಲೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, 'ಬೆಳಗಾವಿ, ಖಾನಾಪುರ, ನಿಪ್ಪಾಣಿ ಹಾಗೂ ಕಾರವಾರ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು' ಎಂದು ಹೇಳಿಕೆ ನೀಡಿರುವ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ಬೆಳಗಾವಿಯಲ್ಲಿ ಮಾತನಾಡಿದ ಅಜಿತ್ ಪವಾರ್ ಅವರು, ಬೆಳಗಾವಿ, ಖಾನಾಪುರ, ನಿಪ್ಪಾಣಿ ಹಾಗೂ ಕಾರವಾರ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂಬುದು ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಕನಸಾಗಿತ್ತು. ಇದೀಗ ನಾವೆಲ್ಲರೂ ಠಾಕ್ರೆ ಅವರ ಕನಸು ನನಸು ಮಾಡಬೇಕಿದೆ. ಈ ಭಾಗದಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದೆ ಎಂದು ಹೇಳಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅಜಿತ್ ಪವಾರ್ ಹೇಳಿಕೆಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಪ್ರಭು ಚೌವ್ಹಾಣ್, ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಕನ್ನಡ ಸಂಘಟನೆಗಳ ಮುಖಂಡರು ಪವಾರ್ ಹೇಳಿಕೆಯನ್ನು ಖಂಡಿಸಿದ್ದು, ಕನ್ನಡಿಗರನ್ನು ಕೆರಳಿಸುವ ಕೆಲಸವನ್ನು ಮಹಾರಾಷ್ಟ್ರ ರಾಜ್ಯದ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕಿಮ್ಮತ್ತು ನೀಡುವ ಅಗತ್ಯವಿಲ್ಲ: ನಾಡು, ನುಡಿ, ಭಾಷೆ ವಿಷಯದಲ್ಲಿ ರಾಜ್ಯ ಸರಕಾರ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಕಿಮ್ಮತು ಕೊಡಬೇಕಾಗಿಯೂ ಇಲ್ಲ. ಗಡಿ ವಿಷಯದಲ್ಲಿ ಕಾಲುಕೆದರಿ ಜಗಳಕ್ಕೆ ಬರುವ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಮಹಾರಾಷ್ಟ್ರದಲ್ಲಿ ಈಗ ಯಾವುದೋ ಚುನಾವಣೆ ಬಂದಿರಬೇಕು. ಈ ಕಾರಣಕ್ಕೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಇಂಥ ಹೇಳಿಕೆಗಳಿಗೆ ಕರ್ನಾಟಕ ಸೊಪ್ಪು ಹಾಕುವುದಿಲ್ಲ. ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಹೆಚ್ಚಿನ ನಾಯಕರು, ಮಂತ್ರಿಗಳು ಇದೇ ಜಿಲ್ಲೆಯವರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಇಲ್ಲಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾವ ಕಾಲಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ. ನಾಡು, ನುಡಿ, ಗಡಿ ವಿಷಯ ಬಂದಾಗ ಅವರು ದಿಟ್ಟ ಕ್ರಮಗಳನ್ನು ತೆಗೆದುಕೊಂಡೇ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಸೋಮಶೇಖರ್ ಹೇಳಿದರು.
ಮರಾಠಿಗರನ್ನು ದೂರುವುದು ಸರಿಯಲ್ಲ: ಬೆಳಗಾವಿಯಲ್ಲಿ ಎಲ್ಲೋ ಒಂದಿಷ್ಟು ಕಿಡಿಗೇಡಿಗಳು ಮಾಡಿದ ಕೆಲಸಕ್ಕಾಗಿ ಇಡೀ ಮರಾಠಿಗರನ್ನು ದೂರುವುದು ಸರಿಯಲ್ಲ. ಕರ್ನಾಟಕದಲ್ಲಿಯೂ ಮರಾಠಿಗರಿದ್ದಾರೆ. ಯಾರು ನಾಲ್ಕು ಕಿಡಿಗೇಡಿಗಳಿಗೋಸ್ಕರ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಮರಾಠಿಗರಲ್ಲಿಯೂ ಕಡುಬಡವರಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಬೆಳಗಾವಿ ಕನ್ನಡಿಗರದ್ದೇ ಅದರಲ್ಲಿ ಎರಡನೇ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಇದು ಕನ್ನಡಿಗರ ಸ್ವತ್ತು. ಮಹಾರಾಷ್ಟ್ರ ಡಿಸಿಎಂ ಹೇಳಿದರು ಎಂಬ ಕಾರಣಕ್ಕಾಗಿ ಇಡೀ ಸಮುದಾಯವನ್ನು ದೂಷಣೆ ಮಾಡುವುದು ತಪ್ಪು. ಅವರು ವಿನಾಕಾರಣ ಕ್ಯಾತೆ ತೆಗೆದರೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಅವರಪ್ಪನದಲ್ಲ, ನಮ್ಮದು: ಕರ್ನಾಟಕ ಅಜಿತ್ ಪವಾರ್ ಅಪ್ಪನದಲ್ಲ, ನಮ್ಮದು. ಅವರು ಏನು ಹೇಳಿದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ. ಕರ್ನಾಟಕ ಮಾತೇ ನಮ್ಮ ತಾಯಿ. ಅವರಿಗೆ ಏನೂ ಸಂಬಂಧವಿಲ್ಲ. ಅವರ ಮಾತಿಗೆ ಯಾವುದೇ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
‘ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರವು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜೀತ್ ಪವಾರ್ ಅವರು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ನಮ್ಮ ಜಿಲ್ಲೆ, ರಾಜ್ಯವನ್ನು ರಕ್ಷಣೆ ಮಾಡಲು ನಾವು ಸಮರ್ಥರಿದ್ದೇವೆ, ನಿಮ್ಮ ರಾಜಕೀಯ ತವಲಿಗಾಗಿ ಇಂತಹ ಅಸಂಬದ್ಧ ಹಾಗೂ ಉದ್ದಟತನದ ಹೇಳಿಯನ್ನು ನೀಡುವುದನ್ನು ನಿಲ್ಲಿಸಿ.’
-ಶಿವರಾಮ್ ಹೆಬ್ಬಾರ್, ಕಾರ್ಮಿಕ ಹಾಗೂ ಕಾರವಾರ ಉಸ್ತುವಾರಿ ಸಚಿವ







