'ಪವರ್ ಟಿವಿ' ಎಂಡಿ ರಾಕೇಶ್ ಶೆಟ್ಟಿಗೆ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು

ಬೆಂಗಳೂರು, ನ.18: ಹಿರಿಯ ರಾಜಕಾರಣಿಯ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಪ್ರತಿಯಾಗಿ ಡೆವಲಪರ್ ಓರ್ವರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಖಾಸಗಿ ಸುದ್ದಿ ವಾಹಿನಿಯ ಎಂಡಿ ರಾಕೇಶ್ ಶೆಟ್ಟಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಮನವಿಯನ್ನು ಷರತ್ತು ಬದ್ಧವಾಗಿ ಪುರಸ್ಕರಿಸಿದೆ. ಅರ್ಜಿದಾರ 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ಮುಂದಿನ 20 ದಿನಗಳಲ್ಲಿ ತನಿಖಾಧಿಕಾರಿ ಎದುರು ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಅಥವಾ ಅವುಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿ ರಾಕೇಶ್ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಅರ್ಜಿದಾರ ರಾಕೇಶ್ ಶೆಟ್ಟಿ ಪರ ಹಿರಿಯ ನ್ಯಾಯವಾದಿ, ಮಾಜಿ ಅಡ್ವಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಹಾಗೂ ಮಾಜಿ ಅಡ್ವಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರು ವಾದ ಮಂಡಿಸಿದ್ದರು.
ಪ್ರಕರಣವೇನು: ರಾಕೇಶ್ ಶೆಟ್ಟಿ ಮಾಲಕತ್ವದ ಪವರ್ ಟಿವಿ ಸುದ್ದಿ ವಾಹಿನಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸಿಎಂ ಹಾಗೂ ಅವರ ಪುತ್ರನ ವಿರುದ್ಧ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ರಾಮಲಿಂಗ ಕನ್ಸ್ಟ್ರಕ್ಷನ್ ಕಂಪೆನಿ ಎಂಡಿ ಚಂದ್ರಕಾಂತ್ ರಾಮಲಿಂಗ ತಮಗೆ ರಾಕೇಶ್ ಶೆಟ್ಟಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಿ ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸರಕಾರದ ಸೂಚನೆ ಮೇರೆಗೆ ಸಿಸಿಬಿ ಪೊಲೀಸರು ರಾಕೇಶ್ ಶೆಟ್ಟಿ ನಿವಾಸ ಹಾಗೂ ಸುದ್ದಿ ವಾಹಿನಿ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ, ಸುದ್ದಿವಾಹಿನಿಯ ಕೆಲ ಪ್ರಮುಖ ಉಪಕರಣಗಳು ಹಾಗೂ ವಾಹಿನಿಗೆ ಸೇರಿದ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ವಶಕ್ಕೆ ಪಡೆದು ಅವುಗಳನ್ನು ನಿರ್ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸುವ ಭೀತಿಯಲ್ಲಿ ರಾಕೇಶ್ ಶೆಟ್ಟಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.







