ಸಂಸದ ನಳಿನ್‌ಗೆ ಇಚ್ಛಾಶಕ್ತಿಯ ಕೊರತೆ: ಮಿಥುನ್ ರೈ
ಮಂಗಳೂರು-ಬಜ್ಪೆ ಕೆಂಜಾರ್‌ಗೆ ಪಂಜಿನ ಮೆರವಣಿಗೆ

ಮಂಗಳೂರು, ನ.18: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಕೇಂದ್ರ ಸರಕಾರವು ಹಸ್ತಾಂತರ ಮಾಡದಂತೆ ತಡೆ ಹಿಡಿಯಬಹುದಾಗಿತ್ತು. ಆದರೆ, ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಇಚ್ಛಾಶಕ್ತಿಯ ಕೊರತೆ ಇದೆ. ಹಾಗಾಗಿಯೇ ಈ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಅದಾನಿ ಗ್ರೂಪ್‌ಗೆ ವಹಿಸಲಾಗಿದೆ. ಜಿಲ್ಲೆಯ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಿದ್ದ ಸಂಸದರು ಮೌನ ತಾಳಿರುವುದು ಖಂಡನೀಯ. ಮಂಗಳೂರು ವಿಮಾನ ನಿಲ್ದಾಣಕ್ಕೆ ಇತಿಹಾಸ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ ಮಾಡುವವರೆಗೆ ಹೋರಾಟ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಸರ್ಕ್ಯೂಟ್ ಹೌಸ್‌ನಿಂದ ಬಜ್ಪೆ ಕೆಂಜಾರುವರೆಗೆ ಬುಧವಾರ ಹಮ್ಮಿಕೊಳ್ಳಲಾದ ಪಂಜಿನ ಮೆರವಣಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದು ಆರಂಭ ಮಾತ್ರ. ಹೋರಾಟ ಇನ್ನೂ ಇದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವವರೆಗೆ ಹೋರಾಟ ಮಾಡಲಾಗುವುದು ಎಂದು ಮಿಥುನ್ ರೈ ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ದ.ಕ.ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ, ಪಂಡಿತ್ ಜವಾಹರಲಾಲ್ ನೆಹರೂ, ಶ್ರೀನಿವಾಸ ಮಲ್ಯರ ಅವರ ಕೊಡುಗೆ ಅಪಾರ. ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜನಸಾಮಾನ್ಯರನ್ನು ಕಡೆಗಣಿಸಿ ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದೆ. ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾಯಿಸಿರುವುದು ಜಿಲ್ಲೆಯ ಜನತೆಗೆ ಮಾಡಿದ ಅವಮಾನವಾಗಿದೆ. ಈ ಹೆಸರನ್ನು ಕಿತ್ತು ಹಾಕುವವರೆಗೆ ಹೋರಾಟ ನಿಲ್ಲದು ಎಂದುರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸೇವಾದಳದ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮತ್ತಿತರರು ಪಾಲ್ಗೊಂಡಿದ್ದರು.












