‘ಗುಪ್ಕರ್ ಗ್ಯಾಂಗ್’ಹೇಳಿಕೆ: ಅಮಿತ್ ಶಾ ವಿರುದ್ಧ ಸಿಡಿದೆದ್ದ ಸೈಫುದ್ದೀನ್ ಸೋಝ್
ಶ್ರೀನಗರ,ನ.18: ಜಮ್ಮು-ಕಾಶ್ಮೀರದ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಮೈತ್ರಿಕೂಟವನ್ನು ‘ಗುಪ್ಕರ್ ಗ್ಯಾಂಗ್’ ಎಂದು ಬಣ್ಣಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತ ಮತ್ತು ಅದರ ಪ್ರಜಾಪ್ರಭುತ್ವವನ್ನು ಕೀಳಾಗಿ ಬಿಂಬಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಝ್ ಅವರು ಕಿಡಿಕಾರಿದ್ದಾರೆ.
ಶಾ ಇಷ್ಟೊಂದು ಕೆಳಮಟ್ಟಕ್ಕಿಳಿದಿರುವುದು ಮತ್ತು ಕಾಶ್ಮೀರದ ಮುಖ್ಯವಾಹಿನಿಯನ್ನು ‘ಗ್ಯಾಂಗ್’ ಎಂದು ಕರೆದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಸೋಝ್,ಬಿಜೆಪಿಯು ಮಾತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುತ್ತದೆ ಎಂದು ಕಲ್ಪಿಸುವ ಮೂಲಕ ಕೇಂದ್ರದ ಆಡಳಿತಾರೂಢ ವರ್ಗವು ದೇಶದಲ್ಲಿ ಆಡಳಿತ ವ್ಯವಸ್ಥೆಗೆ ಈಗಾಗಲೇ ಭಾರಿ ಹಾನಿಯನ್ನುಂಟು ಮಾಡಿದೆ. ಆದರೆ ವಾಸ್ತವವು ಇದಕ್ಕೆ ತದ್ವಿರುದ್ಧವಾಗಿದೆ. ಆಡಳಿತಾರೂಢ ಪಕ್ಷವು ಭಾರತ ಮತ್ತು ಅದರ ಪ್ರಜಾಪ್ರಭುತ್ವಕ್ಕೆ ಕೆಟ್ಟ ಹೆಸರನ್ನು ತಂದಿದೆ ಹಾಗೂ ಕಾಶ್ಮೀರ ಮುಖ್ಯವಾಹಿನಿಯ ಏಕತೆಯನ್ನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆ ಎಂದು ಪರಿಗಣಿಸುವ ಮೂಲಕ ಇಡೀ ವ್ಯವಸ್ಥೆಗೆ ಭಾರೀ ಆಘಾತವನ್ನು ನೀಡಿದೆ ಎಂದು ಹೇಳಿದ್ದಾರೆ.
ಎನ್ಸಿ, ಐಎನ್ಸಿ, ಪಿಡಿಪಿ, ಪಿಸಿ, ಎಎನ್ಸಿಗಳಂತಹ ಕಾಶ್ಮೀರದ ಮುಖ್ಯವಾಹಿನಿ ಪಕ್ಷಗಳ ಪ್ರಜಾಸತ್ತಾತ್ಮಕ ಚಟುವಟಿಕೆಗಳನ್ನು ಅಡ್ಡಿಯೆಂದು ಶಾ ಮತ್ತು ಇತರರು ಏಕೆ ಭಾವಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಕಾಶ್ಮೀರದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ವ್ಯವಹರಿಸಲು ಶಾ ಸಿದ್ಧರಿಲ್ಲದಿದ್ದರೆ ಈಗಿನ ವ್ಯವಸ್ಥೆಗೆ ವಿರುದ್ಧವಾಧ ವ್ಯವಸ್ಥೆಯೊಂದು ರೂಪುಗೊಳ್ಳುವವರೆಗೆ ಅವರು ಕಾಯುತ್ತಾರೆಯೇ ಎಂದು ಪ್ರಶ್ನಿಸಿದ ಸೋಝ್,ಜಮ್ಮು-ಕಾಶ್ಮೀರದ ಮಟ್ಟಿಗೆ ಕೇಂದ್ರದೊಂದಿಗೆ ಸಾಂವಿಧಾನಿಕ ಸಂಬಂಧವು ಇತ್ತೀಚಿನ ವರ್ಷಗಳಲ್ಲಿ ತೀವ್ರ ಹಿನ್ನಡೆಯನ್ನು ಕಂಡಿದೆ ಮತ್ತು ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬಂತೆ ಕಂಡುಬರುತ್ತಿದೆ ಎಂದಿದ್ದಾರೆ.