ರಸ್ತೆ ಕಾಮಗಾರಿಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ಆರೋಪ : ಸದಸ್ಯರ ಆಕ್ರೋಶ, ಲೋಕಾಯುಕ್ತ ತನಿಖೆಗೆ ಒತ್ತಾಯ
ಜಿಪಂ 22ನೇ ಸಾಮಾನ್ಯ ಸಭೆ

ಉಡುಪಿ, ನ.18: ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ ವಾರಾಹಿ ಇಲಾಖೆಯಿಂದ ನಿರ್ಮಾಣಗೊಂಡಿರುವ ರಸ್ತೆ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು, ಕಳಪೆ ಕಾಮಗಾರಿಯಾಗಿರುವುದನ್ನು ಸ್ವತಹ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೇ ಭೇಟಿ ನೀಡಿ ಪರಿಶೀಲಿಸಿ ಒಪ್ಪಿಕೊಂಡಿದ್ದಾರೆ. ಅಧ್ಯಕ್ಷರ ಆದೇಶವನ್ನು ಧಿಕ್ಕರಿಸಿ ಕಾಮಗಾರಿಗೆ 2 ಕೋಟಿ ರೂ. ಪಾವತಿಯಾಗಿದ್ದು ಈ ಬಗ್ಗೆ ಇಂದು ನಡೆದ ಉಡುಪಿ ಜಿಪಂನ 22ನೇ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿಯಾದ ಚರ್ಚೆ ನಡೆಯಿತು.
ಈ ಕುರಿತು ಲೋಕಾಯುಕ್ತದಿಂದ ತನಿಖೆ ನಡೆಸುವಂತೆ ಸದಸ್ಯ ಜನಾರ್ಧನ ತೋನ್ಸೆ ಆಗ್ರಹಿಸಿದರು, ಈ ಕುರಿತಂತೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಪ್ರಾರಂಭದಲ್ಲೇ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಜನಾರ್ದನ ತೋನ್ಸೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ಸಭೆಗಳಲ್ಲಿ ತಾನೀ ವಿಷಯ ಪ್ರಸ್ತಾಪಿಸಿದ್ದು, ಈ ಬಗ್ಗೆ ಇಂದಿನ ಪಾಲನಾ ವರದಿಯಲ್ಲಿ ಯಾವುದೇ ಪ್ರಸ್ತಾಪವಿಲ್ಲದಿರುವುದು ಅವರನ್ನು ಕೆರಳಿಸಿತ್ತು.
ಈಗಾಗಲೇ ಎರಡು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಜಿಪಂ ಅದ್ಯಕ್ಷರು ಹಾಗೂ ಉಪಾಧ್ಯಕ್ಷರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಅತ್ಯಂತ ಕಳಪೆ ಕಾಮಗಾರಿಯಾಗಿರುವುದನ್ನು ಕಣ್ಣಾರೆ ಕಂಡಿದ್ದಾರೆ. ಇದಕ್ಕೆ ಹಣ ಬಿಡುಗಡೆ ಮಾಡದಂತೆ ಸೂಚನೆಯನ್ನೂ ನೀಡಿದ್ದಾರೆ. ಇದನ್ನು ಧಿಕ್ಕರಿಸಿ ವಾರಾಹಿ ಇಲಾಖೆಯ ಅಧಿಕಾರಿ ಕಾಮಗಾರಿ ಬಾಬ್ತು 2 ಕೋಟಿ ರೂ.ವನ್ನು ಬಿಡುಗಡೆ ಮಾಡಿದ್ದಾರೆ ಎಂದರು. ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕೆಂದು ಕಳೆದ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಇವುಗಳೆಲ್ಲದರ ಬಗ್ಗೆ ತೆಗೆದುಕೊಂಡ ಕ್ರಮದ ಕುರಿತು ಇಂದಿನ ವರದಿಯಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಡಾ.ನವೀನ್ ಭಟ್ ವೈ. ಹಾಗೂ ಇತರ ಅಧಿಕಾರಿಗಳು, ವಾರಾಹಿ ಇಲಾಖೆ ನೇರವಾಗಿ ಜಿಪಂ ಅಡಿಗೆ ಬರುವುದಿಲ್ಲ. ಹೀಗಾಗಿ ನಾವು ಬೃಹತ್ ನೀರಾವರಿ ಇಲಾಖೆಗೆ ಪತ್ರ ಬರೆದು ವಿಷಯ ತಿಳಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಬಹುದು. ಈ ಹಿನ್ನೆಲೆಯಲ್ಲಿ ಜ.21, ಸೆ.2 ಹಾಗೂ ನ.12ಕ್ಕೆ ಪತ್ರ ಬರೆದಿದ್ದೇವೆ. ಅದರಲ್ಲಿ ಸದಸ್ಯರ ಲೋಕಾಯುಕ್ತ ತನಿಖೆಗೆ ಒತ್ತಾಯದ ಪ್ರಸ್ತಾಪವೂ ಇದೆ ಎಂದರು.
ಜನಾರ್ದನ ತೋನ್ಸೆ ಅವರನ್ನು ಬೆಂಬಲಿಸಿ ಮಾತನಾಡಿದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಸುಧಾಕರ ಶೆಟ್ಟಿ ಮೈರ್ಮಾಡಿ ಹಾಗೂ ಇತರರು ಇಷ್ಟು ದೊಡ್ಡ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆದಿದೆ. ಇದಕ್ಕೆ ಯಾರ ಒತ್ತಡ ವಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು. ಇದನ್ನು ಹೀಗೆ ಬಿಟ್ಟರೆ ಉಳಿದ ಅಧಿಕಾರಿಗಳಿಗೂ ನಾವೇ ಭ್ರಷ್ಟಾಚಾರ ಮಾಡಲು ಅವಕಾಶ ನೀಡಿದಂತಾಗುತ್ತದೆ ಎಂದರು.
ಸಭೆಯಲ್ಲಿ ಸದಸ್ಯರು ಮಾಡುವ ಚರ್ಚೆ, ಎತ್ತಿರುವ ವಿಷಯಗಳು ಪಾಲನಾ ವರದಿಯಲ್ಲಿ ಬರುವುದಿಲ್ಲವಾದರೆ ನಾವು ಯಾಕೆ ಚರ್ಚಿಸಬೇಕು. ಕಾಟಾಚಾರದ ಸಭೆ ಮಾಡುವುದು ಬೇಡವೇ ಬೇಡ ಎಂದು ಜನಾರ್ದನ ತೋನ್ಸೆ ನುಡಿದರು. ವಿಷಯದ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಮತ್ತೊಮ್ಮೆ ಪತ್ರ ಬರೆಯಲು ಸಭೆ ನಿರ್ಣಯ ಕೈಗೊಂಡಿತು.
ಮರ ಕಡಿಯಲು ಒತ್ತಾಯ: ಬ್ರಹ್ಮಾವರ-ಸೀತಾನದಿ ರಸ್ತೆ ಅಗಲೀಕರಣ ಕಾಮಗಾರಿಗೆ ಈಗಾಗಲೇ ಸರಕಾರ 30 ಕೋಟಿ ರೂ.ಹಣ ಬಿಡುಗಡೆ ಮಾಡಿದೆ. ಆದರೆ ಅಲ್ಲಿರುವ ಮರಗಳನ್ನು ಕಡಿಯಲು ಈಗಾಗಲೇ 60 ಲಕ್ಷ ರೂ.ಗಳನ್ನು ಅರಣ್ಯ ಇಲಾಖೆಗೆ ಸಂದಾಯ ಮಾಡಿದ್ದರೂ, ಅದಿನ್ನೂ ಮರ ಕಡಿಯಲು ಮುಂದಾಗದೇ ವರ್ಷದಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ನಿರ್ಮಾಣಕ್ಕೆ ಅಡ್ಡಿಯಾಗಿರುವ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಶಾಸಕ ಕೆ.ರಘುಪತಿ ಭಟ್, ಕುಂದಾಪುರ ಉಪವಲಯದ ಡಿಎಫ್‌ಓ ಅಶೀಶ್ ರೆಡ್ಡಿ ಅವರಿಗೆ ಸೂಚಿಸಿದರು. ಅರಣ್ಯ ಇಲಖೆಗೆ ಸೂಚಿಸಿದ ಶಾಸಕ ರಘುಪತಿಟ್, ಡಿಎಪ್‌ಓ ಅವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಎಲ್ಲಾ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಎಫ್‌ಓ ಅವರು ಉಡುಪಿ ಶಾಸಕರಿಗೆ ಭರವಸೆ ನೀಡಿದರು.







