ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು, ನ.18: ಚುನಾವಣಾ ತಕರಾರು ಅರ್ಜಿ ಸಂಬಂಧ ಹೈಕೋರ್ಟ್ ನಿರ್ದೇಶನದ ಮೇರೆಗೂ ವಿಚಾರಣೆ ಹಾಜರಾಗದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹೈಕೋರ್ಟ್ 5 ಲಕ್ಷ ರೂ.ದಂಡ ವಿಧಿಸಿ ಆದೇಶಿಸಿದೆ. ಈ ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಪಾವತಿಸುವಂತೆ ಸೂಚಿಸಿದೆ.
ಬಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಈಶ್ವರ್ ಖಂಡ್ರೆ ಅವರು ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ. ಹೀಗಾಗಿ ಆವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಡಿ.ಕೆ.ಸಿದ್ರಾಮ ಅವರು ಹೈಕೋರ್ಟ್‍ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯೂ ಪ್ರಸಾರವಾಗಿತ್ತು. ಆದರೆ, ಈಶ್ವರ್ ಖಂಡ್ರೆ ವಿಚಾರಣೆಗೆ ಹಾಜರಾಗಿರಲಿಲ್ಲ.
ಅಂತಿಮವಾಗಿ ಹಾಜರಾದ ಖಂಡ್ರೆ ನ್ಯಾಯಾಲಯದ ನೋಟಿಸ್ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ಹೈಕೋರ್ಟ್ ಜಾರಿ ಮಾಡಿದ್ದ ನೋಟಿಸ್‍ನ್ನು ತಮ್ಮ ಆಪ್ತ ಸಹಾಯಕ ಗಮನಿಸಿದ್ದರೂ ಆತನಿಗೆ ಮರೆವಿನ ಖಾಯಿಲೆ ಇದ್ದುದರಿಂದ ನನಗೆ ತಿಳಿಸಿರಲಿಲ್ಲ. ಇದರಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಆದರೆ, ಓರ್ವ ಜನಪ್ರತಿನಿಧಿಯಾಗಿ ನ್ಯಾಯಾಲಯದ ಸೂಚನೆ ತಲುಪಿಲ್ಲ ಎಂಬುದು ಸರಿಯಲ್ಲ. ಹಾಗೆಯೇ ಮಾಧ್ಯಮಗಳಲ್ಲಿ ಸಾಕಷ್ಟು ವರದಿ ಬಂದಿದ್ದೂ ತಮಗೆ ಮಾಹಿತಿ ಇಲ್ಲ ಎಂಬುದು ಒಪ್ಪಿತವಾದ ವಾದವಲ್ಲ. ಜನಪ್ರತಿನಿಧಿಗಳು ನ್ಯಾಯಾಲಯದ ಆದೇಶಗಳಿಗೆ ಗೌರವ ತೋರಿಸದೇ ಇರುವುದು ಕ್ಷಮಾರ್ಹವಲ್ಲ. ಅಲ್ಲದೇ ಪ್ರಕರಣವನ್ನು 2 ವರ್ಷಗಳ ಕಾಲ ತಳ್ಳಿಕೊಂಡು ಬರುವುದು ಸೂಕ್ತವಲ್ಲ. ಇದಕ್ಕೆ ಕಾರಣವಾಗಿರುವ ಈಶ್ವರ ಖಂಡ್ರೆ 5 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕು. ದಂಡದ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ಪಾವತಿಸಬೇಕು. ಮುಂದೆ ಸೂಕ್ತ ಕಾರಣವಿಲ್ಲದೆ ಈ ರೀತಿ ವಿಚಾರಣೆಗೆ ಗೈರು ಹಾಜರಾಗುವುದು ಅಥವಾ ಮುಂದೂಡುವುದನ್ನು ಮಾಡಬಾರದು ಎಂದು ಹೈಕೋರ್ಟ್ ಆದೇಶಿಸಿದೆ.







