ಕಪಿಲ್ ಮಿಶ್ರಾರಿಂದ ಹಿಂದುತ್ವ ಸೇನೆ ?

ಕಪಿಲ್ ಮಿಶ್ರಾ
ಹೊಸದಿಲ್ಲಿ, ನ. 18: ಬಿಜೆಪಿಯ ನಾಯಕ ಕಪಿಲ್ ಮಿಶ್ರಾ ‘ಹಿಂದೂ ಇಕೋಸಿಸ್ಟಮ್’ ಎಂದು ಕರೆಯಲ್ಪಡುವ ಖಾಸಗಿ ಹಿಂದುತ್ವ ಸೇನೆಗಾಗಿ ನೇಮಕಾತಿ ಆರಂಭಿಸಿದ್ದಾರೆ.
ಟ್ವಿಟರ್ ಹಾಗೂ ಫೇಸ್ಬುಕ್ ಸೇರಿದಂತೆ ತನ್ನ ಎಲ್ಲ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ‘ಟೀಮ್-ಹಿಂದೂ ಇಕೋಸಿಸ್ಟಮ್’ಗೆ ಸದಸ್ಯರನ್ನು ನೇಮಕಾತಿ ನಡೆಸುವುದಾಗಿ ಪ್ರಕಟಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಂದೇಶ ಕಂಡು ಬರುತ್ತಿದೆ. ಅವರು ಪ್ರಸಾರ ಮಾಡಿದ ಗೂಗಲ್ ಡಾಕ್ ಅರ್ಜಿಯನ್ನು ಜನರು ಭರ್ತಿಗೊಳಿಸಲು ಆರಂಭಿಸಿದ್ದಾರೆ. ತನ್ನ ಬೆಂಬಲಿಗರ ವೈಯಕ್ತಿಕ ವಿವರಗಳನ್ನು ಕೋರುವಾಗ ಅವರ ಒಂದು ಪ್ರಮುಖ ನಿರ್ಣಾಯಕ ಪ್ರಶ್ನೆ ಎಂದರೆ, ‘‘ನಿಮಗೆ ಯಾವುದಾದರೂ ವಿಷಯದಲ್ಲಿ ವಿಶೇಷ ಆಸಕ್ತಿ ಇದೆಯೇ ?’’ ಎಂಬುದು. ಈ ವಿಶೇಷ ಆಸಕ್ತಿ ಲವ್ ಜಿಹಾದ್, ಘರ್ವಾಪಸಿ, ಗೋರಕ್ಷಣೆಯನ್ನು ಒಳಗೊಂಡಿದೆ. ತನ್ನ ಟೀಮ್-ಹಿಂದೂ ಇಕೋಸಿಸ್ಟಮ್ ಗೆ ಮೂರು ಗಂಟೆಗಳಲ್ಲಿ 5,000 ಮಂದಿ ಸದಸ್ಯರಾಗಿದ್ದಾರೆ ಎಂದು ಕಪಿಲ್ ಮಿಶ್ರಾ ಪ್ರತಿಪಾದಿಸಿದ್ದಾರೆ. ಈ ಸೇನೆಯನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂಬ ಬಗ್ಗೆ ಕಾನೂನು ಅಥವಾ ಆಡಳಿತ ಪ್ರಾಧಿಕಾರ ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತಿಲ್ಲ.
ಮಿಶ್ರಾರ ಗೂಗಲ್ ಅರ್ಜಿಯ ಅಟೋಮ್ಯಾಟಿಕ್ ಸ್ವೀಕೃತಿ ತಂಡ ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಸಂಘಟಿತವಾಗಿ ಕೆಲಸ ನಿರ್ವಹಿಸಲಿದೆ ಎಂದು ಪ್ರತಿಪಾದಿಸಿದೆ.





