ಪಿಎಚ್‍ಡಿ-ಎಂ.ಫಿಲ್ ವ್ಯಾಸಂಗ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡುವಂತೆ ಅಬ್ದುಲ್ ಅಝೀಮ್ ಮನವಿ

ಬೆಂಗಳೂರು, ನ.18: ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಎರಡು ವರ್ಷಗಳ ಅವಧಿಗೆ ಮಾತ್ರ ಫೆಲೋಶಿಪ್ ವಾರ್ಷಿಕ 1 ಲಕ್ಷ ರೂ.ಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ, ಪ್ರತಿ ತಿಂಗಳು ಈ ಹಿಂದೆ 25 ಸಾವಿರ ರೂ.ಗಳನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಈಗ 8334 ರೂ.ಗಳನ್ನು ಮಾತ್ರ ಪಡೆಯುವಂತಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ್ ಪಾಟೀಲ್, ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‍ಗೆ ಅಬ್ದುಲ್ ಅಝೀಮ್ ಪತ್ರ ಬರೆದಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡುವುದಲ್ಲದೆ, ಪುಸ್ತಕಗಳನ್ನು ಕೊಳ್ಳಬೇಕು. ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಿತ್ತನೆಯಿಂದ ಹಿಡಿದು ಬೆಳೆ ಕಟಾವಿನವರೆಗೆ ಬೀಜ, ಗೊಬ್ಬರ ಖರೀದಿ ಹಾಗೂ ಇತರೆ ಸಾಮಗ್ರಿಗಳಿಗೆ 8,334 ರೂ.ಗಳಲ್ಲಿಯೆ ಖರ್ಚು ಮಾಡಬೇಕಾಗಿದೆ. ಅಲ್ಲದೆ, ಈ ವಿದ್ಯಾರ್ಥಿಗಳು ತಾವು ಮಾಡುತ್ತಿದ್ದ ಉದ್ಯೋಗ ಬಿಟ್ಟು ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಇವರ ಜೀವನ ನಿರ್ವಹಣೆಯೂ ಪ್ರತಿ ತಿಂಗಳು ಪಡೆಯುತ್ತಿದ್ದ 25 ಸಾವಿರ ರೂ.ಗಳಲ್ಲಿಯೆ ನಡೆಯುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಈಗ ಈ ವಿದ್ಯಾರ್ಥಿಗಳ ಜೀವನ ನಿರ್ವಹಣೆಗೂ ಕಂಟಕ ಒದಗಿಬಂದಿದೆ. ಇದರಿಂದ ವ್ಯಾಸಂಗ ಕಡೆಗೆ ಗಮನ ನೀಡುವುದು ಕಷ್ಟವಾಗುತ್ತಿದೆ. ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 23 ಸಾವಿರ ರೂ.ಗಳನ್ನು ಪಾವತಿಸುತ್ತಿದ್ದು, ಇದೇ ರೀತಿ ಅಲ್ಪಸಂಖ್ಯಾತರ ಸಂಶೋಧನಾ ವಿದ್ಯಾರ್ಥಿಗಳಿಗೂ ನೀಡುವುದು ಸಮಂಜಸ ಎಂದು ಅಬ್ದುಲ್ ಅಝೀಮ್ ಪ್ರತಿಪಾದಿಸಿದ್ದಾರೆ.
ಮೌಲಾನ ಆಝಾದ್ ಕೇಂದ್ರದಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರವು, ಪ್ರತಿ ತಿಂಗಳು 35 ಸಾವಿರ ರೂ.ಗಳ ಫೆಲೋಶಿಪ್ ನೀಡುತ್ತಿದೆ. ಈ ಸಂಸ್ಥೆಯಲ್ಲಿ ಹಲವಾರು ಅಲ್ಪಸಂಖ್ಯಾತರ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದು, ಇವರು ಅಲ್ಲಿನ ಸಂಸ್ಥೆಯಿಂದ ಹೊರಬಂದು ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಂತೆ, ಈ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಫೆಲೋಶಿಪ್ ಸೌಲಭ್ಯ ಹಾಗೂ ರಾಜ್ಯದಲ್ಲಿ ಖಡಿತಗೊಂಡಿರುವ ಫೆಲೋಶಿಪ್‍ನಿಂದಾಗಿ ವಂಚಿತಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಆದುದರಿಂದ, ಪಿಎಚ್‍ಡಿ, ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 25 ಸಾವಿರ ರೂ.ಗಳ ಫೆಲೋಶಿಪ್ ಸೌಲಭ್ಯವನ್ನು ಮುಂದುವರೆಸುವಂತೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಅವರು ಮನವಿ ಮಾಡಿದ್ದಾರೆ.







