ಬೆಂಗಳೂರು ತಾಂತ್ರಿಕ ಮೇಳ ಗುರುವಾರ ಆರಂಭ: ಪ್ರಧಾನಿ ಮೋದಿ ಉದ್ಘಾಟನೆ

ಬೆಂಗಳೂರು, ನ.18: ಕೋವಿಡ್ ಸವಾಲಿನ ನಡುವೆ ಇದೇ ಮೊದಲ ಬಾರಿಗೆ ವರ್ಚುವಲ್ ಆಗಿ ನಡೆಯಲಿರುವ ಭಾರತದ ಮಹತ್ವದ ತಾಂತ್ರಿಕ ಕಾರ್ಯಕ್ರಮವಾದ “ಬೆಂಗಳೂರು ತಂತ್ರಜ್ಞಾನ ಮೇಳ-2020 (ಬಿಟಿಎಸ್-2020)”ಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಗ್ಗೆ 10ಕ್ಕೆ ಆರಂಭಗೊಳ್ಳಲಿರುವ ಮೂರು ದಿನಗಳ ಈ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬೆಂಗಳೂರು ತಂತ್ರಜ್ಞಾನ ಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಸ್ವಿಜ್ ಗಣರಾಜ್ಯದ ಉಪರಾಷ್ಟ್ರಾಧ್ಯಕ್ಷ ಗೈ ಪರ್ಮೆಲಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರಕಾರದ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಆನ್‍ಲೈನ್ ಮೂಲಕ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮಾರಂಭದಲ್ಲಿ ಹಾಜರಿರುತ್ತಾರೆ ಎಂದರು.
ಬೆಂಗಳೂರು ತಂತ್ರಜ್ಞಾನ ಮೇಳದ 23ನೇ ಆವೃತ್ತಿ ಇದಾಗಿದೆ. ಇದಕ್ಕೆ ಮುನ್ನ 22 ಮೇಳಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ಪ್ರಪಂಚಾದಾದ್ಯಂತ ಗಮನ ಸೆಳೆದಿದ್ದವು. ಆದರೆ ಈ ಬಾರಿ ಕೋವಿಡ್ ಸೋಂಕು ಮಾರಿಯ ಹಿನ್ನೆಲೆಯಲ್ಲಿ ವರ್ಚುವಲ್ ಆಗಿ ಮೇಳ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದನೆ ಹೇಗಿರುತ್ತದೋ ಎಂಬ ಅಂಜಿಕೆ ಆರಂಭದಲ್ಲಿ ಇತ್ತು. ಆದರೆ ದೇಶ ವಿದೇಶಗಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಫಿನ್ಲೆಂಡ್, ಇಸ್ರೇಲ್, ನೆದರ್ ಲೆಂಡ್ಸ್, ಯುಕೆ, ಕೆನಡಾ, ಆಸ್ಟ್ರೇಲಿಯ, ಜರ್ಮನಿ, ಫ್ರಾನ್ಸ್, ಸ್ವೀಡನ್, ಸ್ವಿಟ್ಜರ್‍ಲ್ಯಾಂಡ್, ಡೆನ್ಮಾರ್ಕ್, ತೈವಾನ್, ಜಪಾನ್, ಲಿಥುವಾನಿಯಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳು ಈ ಮೇಳವನ್ನು ಕಾತರದಿಂದ ಎದುರು ನೋಡುತ್ತಿವೆ. 100ಕ್ಕೂ ಹೆಚ್ಚು ನವೋದ್ಯಮಗಳು, 4000ಕ್ಕೂ ಹೆಚ್ಚು ಉದ್ಯಮ ಗಣ್ಯರು, ಸುಮಾರು 270 ವಿಷಯ ಪರಿಣತರು ಹಾಗೂ 70ಕ್ಕೂ ಹೆಚ್ಚು ಗೋಷ್ಠಿಗಳಿಗೆ ಮೇಳ ಸಾಕ್ಷಿಯಾಗಲಿದೆ. 250ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿವೆ 20,000ಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ವೇಳೆ ರಾಜ್ಯ ಸರಕಾರವು ಬೇರೆ ದೇಶಗಳೊಂದಿಗೆ ಕನಿಷ್ಠ 7 ಪರಸ್ಪರ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ ಎಂದು ಅವರು ಹೇಳಿದರು.
ವೈವಿಧ್ಯಮಯ ಗೋಷ್ಠಿ: ನಾಲೆಜ್ ಹಬ್, ಇನ್ನೊವೇಷನ್ ಕಾರ್ನರ್, ಒನ್ ಹೆಲ್ತ್, ಕಂಟ್ರಿ ಸೆಷನ್ಸ್ ವಿಭಾಗಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಜನರ ದೈನಂದಿನ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿರುವ ತಾಂತ್ರಿಕ ನಾವೀನ್ಯತೆಗಳನ್ನು ಗಮನದಲ್ಲಿರಿಸಿಕೊಂಡು ವಿಷಯ ಗೋಷ್ಠಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೃಷಿ ತಾಂತ್ರಿಕತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಸೇವೆ, ಆಹಾರ ಮತ್ತು ಪೌಷ್ಟಿಕತೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಡ್ರೋನ್, 5ಜಿ, ಸೈಬರ್ ಸುರಕ್ಷತೆ, ಸ್ಮಾರ್ಟ್ ಸಿಟಿಗಳು ಹಾಗೂ ನಗರ ಸುಸ್ಥಿರತೆ, ಲಸಿಕೆಗಳು (ಆವಿಷ್ಕಾರ ಮತ್ತು ಅಭಿವೃದ್ಧಿ), ಕೊರೋನ ನಂತರದ ಸನ್ನಿವೇಶದಲ್ಲಿ ನಾಯಕತ್ವದ ಪುನರ್ ವ್ಯಾಖ್ಯಾನ, ರಾಷ್ಟ್ರೀಯ ಶಿಕ್ಷಣ ನೀತಿ, ಫಿನ್ ಟೆಕ್ ಇತ್ಯಾದಿ ವಿಷಯಗಳನ್ನು ಇವು ಒಳಗೊಂಡಿವೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
‘ಹಸಿರು ಪುನರ್ ಸೃಷ್ಟಿಯಲ್ಲಿ ತಂತ್ರಜ್ಞಾನದ ಪಾತ್ರ ಹಾಗೂ ಸುಸ್ಥಿರ ಭವಿಷ್ಯ’ ಕುರಿತು (ಯುಕೆ), “ಸೈಬರ್ ಸ್ಪೇಸ್‍ನಿಂದ ಔಟರ್ ಸ್ಪೇಸ್‍ವರೆಗೆ” ಕುರಿತು (ಆಸ್ಟ್ರೇಲಿಯ), “ಆಹಾರ ಮತ್ತು ಪೌಷ್ಟಿಕತೆಯ ಭವಿಷ್ಯದ ಡ್ರೈವಿಂಗ್” ಕುರಿತು (ಸ್ವಿಟ್ಜರ್ ಲೆಂಡ್), “ಇ-ಮೊಬಿಲಿಟಿ, ಭವಿಷ್ಯದೆಡೆಗೆ ಹೆಜ್ಜೆ” ಕುರಿತು (ಜರ್ಮನಿ) ವಿಷಯ ಮಂಡನೆಗೆ ಉತ್ಸುಕವಾಗಿವೆ. ಕರ್ನಾಟಕ ಸೇರಿದಂತೆ ಭಾರತದ 50ಕ್ಕೂ ಹೆಚ್ಚು ನವೋದ್ಯಮಗಳಿಗೆ ಯುರೋಪ್ ಮಾರುಕಟ್ಟೆ ಪ್ರವೇಶಿಸುವುದಕ್ಕೆ ನೆರವಾಗಲು ನೆದರ್ ಲೆಂಡ್ಸ್ ಒತ್ತು ನೀಡಲಿದೆ ಎಂದು ಅವರು ಹೇಳಿದರು.
ಜಾಗತಿಕ ನಾವೀನ್ಯತಾ ಮೈತ್ರಿಯು (ಜಿಐಎ) ಕರ್ನಾಟಕ ಹಾಗೂ ವಿವಿಧ ರಾಷ್ಟ್ರಗಳ ನಡುವೆ ಹೊಸ ಒಪ್ಪಂದಗಳಿಗೆ ಅನುವು ಮಾಡಿಕೊಡುತ್ತಿರುವುದು ಖುಷಿಯ ಸಂಗತಿಯಾಗಿದೆ. ಬದುಕಿನ ಗುಣಮಟ್ಟ ಸುಧಾರಿಸುವ ದಿಸೆಯಲ್ಲಿ ಹೊಸ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಇಂತಹ ಮೇಳಗಳು ಅತ್ಯಗತ್ಯ. ವಿದೇಶಗಳ ಸಚಿವರು, ರಾಯಭಾರಿಗಳು, ಹೆಸರಾಂತ ವಿಷಯ ಪರಿಣತರು ಸೇರಿದಂತೆ 25ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಉಪಸ್ಥಿತರಿದ್ದರು.







