ವಂಚನೆ ಆರೋಪ ತಳ್ಳಿಹಾಕಿದ ಚುನಾವಣಾ ಅಧಿಕಾರಿಯನ್ನು ಉಚ್ಛಾಟಿಸಿದ ಟ್ರಂಪ್

ವಾಶಿಂಗ್ಟನ್, ನ. 18: ನವೆಂಬರ್ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ವಂಚನೆ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಧಾರ ರಹಿತ ಆರೋಪಗಳನ್ನು ತಿರಸ್ಕರಿಸಿರುವ ಹಿರಿಯ ಚುನಾವಣಾ ಭದ್ರತಾ ಅಧಿಕಾರಿಯನ್ನು ಟ್ರಂಪ್ ಮಂಗಳವಾರ ಉಚ್ಚಾಟಿಸಿದ್ದಾರೆ.
ಈ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್ ತನ್ನ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಪರಾಭವಗೊಂಡಿದ್ದಾರೆ ಹಾಗೂ ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
‘‘ಈ ಬಾರಿಯ ಚುನಾವಣೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸುಭದ್ರ ಚುನಾವಣೆ’’ ಎಂಬುದಾಗಿ ಅಮೆರಿಕದ ಚುನಾವಣಾ ಭದ್ರತಾ ಸಂಸ್ಥೆ ಘೋಷಿಸಿದೆ.
ಚುನಾವಣಾ ಭದ್ರತಾ ಸಂಸ್ಥೆಯ ಮುಖ್ಯಸ್ಥ ಕ್ರಿಸ್ ಕ್ರೆಬ್ಸ್‌ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.
‘‘2020ರ ಚುನಾವಣೆಯ ಭದ್ರತೆ ಬಗ್ಗೆ ಕ್ರಿಸ್ ಕ್ರೆಬ್ಸ್ ಇತ್ತೀಚೆಗೆ ನೀಡಿರುವ ಹೇಳಿಕೆ ತಪ್ಪಾಗಿದೆ. ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ಮತ್ತು ವಂಚನೆ ನಡೆದಿದೆ’’ ಎಂಬುದಾಗಿ ಟ್ರಂಪ್ ಟ್ವೀಟ್‌ನಲ್ಲಿ ಬರೆದಿದ್ದಾರೆ.