ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ ರಾಜೀನಾಮೆ ವಿಚಾರ: ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಿಂದಲೇ ಮಾತಿನ ಚಕಮಕಿ
ಪಕ್ಷದ ವಿರುದ್ಧ ಏಕಾಂಗಿಯಾಗಿ ಹೋರಾಡಿ ಹಠ ಸಾಧಿಸಿದ ಅಧ್ಯಕ್ಷೆ

ಚಿಕ್ಕಮಗಳೂರು, ನ.18: ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನದ ರಾಜೀನಾಮೆ ವಿವಾದ ಮುಂದುವರಿದಿದ್ದು, ಜಿಪಂ ಕಚೇರಿಯ ನಝೀರ್‍ಸಾಬ್ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದವರು ರಾಜೀನಾಮೆ ವಿಚಾರವನ್ನು ಮುನ್ನಲೆಗೆ ತಂದು ಜಿಪಂ ಅಧ್ಯಕ್ಷೆ ಹಾಗೂ ವಿರೋಧ ಪಕ್ಷಗಳ ಸದಸ್ಯರೊಂದಿಗೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಸಿದರು. ಜಿಪಂ ಅಧ್ಯಕ್ಷೆಯ ರಾಜೀನಾಮೆಯ ಪಟ್ಟು ಹಾಗೂ ಗದ್ದಲ, ಗೊಂದಲಗಳ ನಡುವೆಯೂ ಸಭೆಯ ಅಂತಿಮ ಕ್ಷಣದಲ್ಲಿ ಜಿಪಂ ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲ ಸದಸ್ಯರು ಸರ್ವಾನುಮತದಿಂದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಕೋರ್ ಕಮಿಟಿ ಸೂಚನೆ ನೀಡಿತ್ತು. ಆದರೆ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು, ಒಪ್ಪಂದದಂತೆ ತನಗೆ ಪಕ್ಷದ ಮುಖಂಡರು 40 ತಿಂಗಳ ಅಧಿಕಾರವಧಿಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವಧಿ ಪೂರ್ಣವಾಗುವವರೆಗೂ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಈ ಹಿಂದೆ ಕರೆಯಲಾಗಿದ್ದ ಎರಡು ಜಿಪಂ ಸಾಮಾನ್ಯ ಸಭೆಗೆ ಜಿಪಂ ಆಡಳಿತ ಪಕ್ಷದ ಸದಸ್ಯರು ಗೈರಾಗಿದ್ದರು. ಸಭೆಯಲ್ಲಿ ಕೋರಂ ಕೊರತೆಯಿಂದಾಗಿ ಎರಡೂ ಸಭೆಗಳನ್ನು ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ.18ರಂದು ಜಿಪಂ ಅಧ್ಯಕ್ಷೆ ಸಾಮಾನ್ಯ ಸಭೆಯನ್ನು ಕರೆದಿದ್ದರು.
ಬುಧವಾರ ಬೆಳಗ್ಗೆ ಆರಂಭವಾದ ಸಾಮಾನ್ಯ ಸಭೆಗೆ ವಿರೋಧ ಪಕ್ಷಗಳ ಸದಸ್ಯರೂ ಸೇರಿದಂತೆ ಆಡಳಿತ ಪಕ್ಷದ ಸದಸ್ಯರೂ ಆಗಮಿಸಿದ್ದರು. ಸಭೆಯ ಆರಂಭದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತು ಆರಂಭಿಸಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದ ಬಳಿಕ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುವುದಾಗಿ ತಿಳಿಸಿದರು. ಈ ವೇಳೆ ಶೃಂಗೇರಿ ಜಿಪಂ ಕ್ಷೇತ್ರದ ಸದಸ್ಯ ಶೃಂಗೇರಿ ಶಿವಣ್ಣ ಮಾತನಾಡಿ, ಹಿಂದಿನ ಎರಡು ಸಭೆಗೆ ಜಿಪಂ ಆಡಳಿತ ಪಕ್ಷವಾಗಿರುವ ಬಿಜೆಪಿ ಪಕ್ಷದ ಜಿಪಂ ಸದಸ್ಯರು ಸಭೆಗೆ ಗೈರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಜಿಪಂ ಅಧ್ಯಕ್ಷೆ ಸುಜಾತಾ ಅವರ ಕಾರ್ಯವೈಖರಿಯ ಬಗ್ಗೆ ಸದಸ್ಯರಲ್ಲಿ ಅಸಮಾಧಾನ ಇರುವುದೇ ಆಗಿದೆ. ಜಿಪಂ ಅಧ್ಯಕ್ಷೆಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಸದಸ್ಯರ ಯಾವ ಕೆಲಸಗಳೂ ಆಗುತ್ತಿಲ್ಲ.
ಜಿಪಂ ಅಧ್ಯಕ್ಷರ ಕಾರು ಚಾಲಕ ಶೃಂಗೇರಿ ತಾಲೂಕಿನಲ್ಲಿ ತಾನೇ ಜಿಪಂ ಅಧ್ಯಕ್ಷನಂತೆ ವಸತಿ ಶಾಲೆಯೊಂದರ ಪ್ರಾಂಶುಪಾಲರಿಗೆ ಬೆದರಿಕೆ ಹಾಕುತ್ತಿದ್ದಾನೆ. ಸಾಮಾನ್ಯ ಸಭೆಯ ವಿಚಾರದಲ್ಲಿ ಸದಸ್ಯರಿಗೆ ಕರೆ ಮಾಡಿ ಮಾತುಕತೆ ನಡೆಸುವ ಸೌಜನ್ಯವನ್ನೂ ತೋರಿಲ್ಲ. ಪತ್ರಿಕಾಗೋಷ್ಠಿ ನಡೆಸಿ ದಲಿತರಿಗೆ ಅನ್ಯಾಯವಾಗಿದೆ ಎಂದು ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡುವ ಮೂಲಕ ತಮಗೆ ಸ್ಥಾನಮಾನ ನೀಡಿದ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದೀರಿ. ನಿಮ್ಮ ಕಾರ್ಯವೈಖರಿಗೆ ಬಗ್ಗೆ ಸದಸ್ಯರಲ್ಲಿ ಅಸಮಾಧನವಿದ್ದ ಕಾರಣಕ್ಕೆ ಹಿಂದಿನ ಎರಡು ಸಭೆಗೆ ಹಾಜರಾಗಿಲ್ಲ. ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಜಿಪಂ ಆಡಳಿತ ಪಕ್ಷದ ಇತರ ಸದಸ್ಯರೂ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ರಾಜೀನಾಮೆ ವಿಚಾರ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಬೇಡ. ರಾಜೀನಾಮೆ ನೀಡಬೇಕೋ ಬೇಡವೋ ಎಂಬುದನ್ನು ತಾನು ಪಕ್ಷದ ಮುಖಂಡರ ಬಳಿ ಚರ್ಚಿಸುತ್ತೇನೆ ಎಂದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರಾದ ರವೀಂದ್ರ ಬೆಳವಾಡಿ, ಕವಿತಾ, ಬಣಕಲ್ ಶಾಮಣ್ಣ ಸೇರಿದಂತೆ ಇತರ ಸದಸ್ಯರು, ಅಧ್ಯಕ್ಷರ ಮೇಲೆ ತಮಗೆ ವಿಶ್ವಾಸವಿಲ್ಲ, ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಸುಜಾತಾ ಕೃಷ್ಣಪ್ಪ ತಾನು ರಾಜೀನಾಮೆ ನೀಡಲ್ಲ ಎಂದು ಹೇಳಿದಾಗ, ಜಿಪಂ ಅಧ್ಯಕ್ಷೆ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಇದೇ ವೇಳೆ ವಿರೋಧ ಪಕ್ಷದ ಸದಸ್ಯರಾದ ಪ್ರಭಾಕರ್, ಶರತ್ ಕೃಷ್ಣಮೂರ್ತಿ, ಸದಾಶಿವ ಮತ್ತಿತರರು ಮಾತನಾಡಿ, ಜಿಪಂ ಅಧ್ಯಕ್ಷೆಯ ರಾಜೀನಾಮೆ ವಿಚಾರ ಪಕ್ಷದ ಆಂತರಿಕ ವಿಚಾರವಾಗಿದ್ದು, ಅದನ್ನು ಪಕ್ಷದ ಕಚೇರಿಯಲ್ಲಿ ಬಗೆಹರಿಸಿಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರ ಪ್ರಸ್ತಾಪಿಸಿ ಸಾಮಾನ್ಯ ಸಭೆಗೆ ಅಡ್ಡಿಪಡಿಸಬಾರದು ಎಂದಾಗ ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷಗಳ ಸದಸ್ಯರ ಮೇಲೆ ಹರಿಹಾಯ್ದರು. ಈ ವೇಳೆ ಸಭೆಯಲ್ಲಿ ಭಾರೀ ಗದ್ದಲ ಏರ್ಪಡುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ರಾಮಸ್ವಾಮಿ, ಮಹೇಶ್ ಒಡೆಯರ್ ಹೊರತುಪಡಿಸಿ ಎಲ್ಲ ಸದಸ್ಯರು ಸಭೆಯಿಂದ ಎದ್ದು ಹೊರನಡೆದು ತಮ್ಮದೇ ಪಕ್ಷದ ಸದಸ್ಯೆ ಹಾಗೂ ಜಿಪಂ ಅಧ್ಯಕ್ಷೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಲ್ಲದೇ ಜಿಪಂ ಅಧ್ಯಕ್ಷೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಎಳೆದುಕೊಂಡು ಹೋಗಿ ಎಂದು ಕೂಗಾಡಿದರು.
ಆಡಳಿತ ಪಕ್ಷದ ಸದಸ್ಯರು ಸಭೆಯಿಂದ ಹೊರ ನಡೆದ ಬಳಿಕ ಕಾಂಗ್ರೆಸ್‍ನಿಂದ ಉಚ್ಚಾಟನೆ ಗೊಂಡಿರುವ ಜಿಪಂ ಸದಸ್ಯ ಮಹೇಶ್ ಒಡೆಯರ್ ಅಧ್ಯಕ್ಷೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತು ಮುಂದುವರಿಸಿದ್ದರಿಂದ ಮತ್ತೆ ವಿರೋಧ ಪಕ್ಷಗಳ ಕಂಗೆಣ್ಣಿಗೆ ಗುರಿಯಾದರು. ಆಗ ಸಭೆಯಲ್ಲಿ ಮತ್ತೆ ಮಾತಿನ ಚಕಮಕಿ ನಡೆಯಿತು. ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಧ್ಯೆ ಪ್ರವೇಶಿಸಿದ ವಾಗ್ವಾದವನ್ನು ತಿಳಿಗೊಳಿಸಿದರು. ಗದ್ದಲ ಗೊಂದಲ ತೀವ್ರಗೊಳ್ಳುತ್ತಿದ್ದಂತೆ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಸಭೆ ಮತ್ತೆ ಮುಂದುವರಿದಾಗ ಸಭೆಯಿಂದ ಎದ್ದು ಹೋಗಿದ್ದ ಆಡಳಿತ ಪಕ್ಷದ ಸದಸ್ಯರೂ ಸಭೆಗೆ ಹಾಜರಾದರು. ಈ ವೇಳೆ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ರಾಮಸ್ವಾಮಿ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕ್ರಿಯಾ ಯೋಜನೆಗೆ ಷರತ್ತು ಬದ್ಧ ಅನುಮೋದನೆ ನೀಡುತ್ತೇವೆ. ಸರಕಾರಿ ಅನುದಾನದಲ್ಲಿ ಜಿಪಂ ತುರ್ತು ನಿಧಿಯನು ರದ್ದು ಮಾಡಿ, ಅದನ್ನು ಎಲ್ಲ ಕ್ಷೇತ್ರಕ್ಕೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದರು. ಇದಕ್ಕೆ ಜಿಪಂ ಅಧ್ಯಕ್ಷೆ ಒಪ್ಪಿಗೆ ನೀಡಿದ್ದರಿಂದ ಕ್ರಿಯಾಯೋಜನೆಗೆ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಜಿಪಂ ಅಧ್ಯಕ್ಷೆ ಸುಜಾತಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸಭೆಯಿಂದ ಹೊರನಡೆದರು.
ಸಭೆಯಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಜಿಪಂ ಉಪಾಧ್ಯಕ್ಷ ಸೋಮಶೇಖರ್, ಸಿಇಒ ಎಸ್.ಪೂವಿತಾ, ಮಾಜಿ ಉಪಾಧ್ಯಕ್ಷರಾದ ಆನಂದಪ್ಪ, ವಿಜಯ್‍ಕುಮಾರ್ ಸೇರಿದಂತೆ ಆಡಳಿತ, ವಿರೋಧ ಪಕ್ಷದ ಸದಸ್ಯರು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಸಕ ರಾಜೇಗೌಡ ಜಿಪಂ ಅಧ್ಯಕ್ಷೆಯನ್ನು ಖರೀದಿಸಿದ್ದಾರಾ ?
ಜಿಪಂ ಅಧ್ಯಕ್ಷೆಯ ರಾಜೀನಾಮೆ ವಿಚಾರ ಮುಂದಿಟ್ಟುಕೊಂಡು ಸಭೆಯಲ್ಲಿ ಗದ್ದಲ ಎಬ್ಬಿಸಿದ ಆಡಳಿತ ಪಕ್ಷದ ಸದಸ್ಯರು ಸಭೆಯಿಂದ ಹೊರನಡೆದಾಗ ಮಾತು ಆರಂಭಿಸಿದ ಜಿಪಂ ಸದಸ್ಯ ಮಹೇಶ್ ಒಡೆಯರ್ ಮಾತಿನಿಂದ ವಿರೋಧ ಪಕ್ಷಗಳ ಸದಸ್ಯರು ಗರಂ ಆಗಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಉಚ್ಚಾಟನೆಗೊಂಡು ಬಿಜೆಪಿ ಸೇರಿರುವ ಮಹೇಶ್ ಒಡೆಯರ್ ಉದ್ದೇಶಿಸಿ ಶಾಸಕ ಟಿ.ಡಿ.ರಾಜೇಗೌಡ, ಮಹೇಶ್ ಒಡೆಯರ್ ರನ್ನ ಬಿಜೆಪಿಯವರು ಖರೀದಿಸಿದ್ದಾರಾ ಎಂದು ತಮ್ಮ ಪಕ್ಷದ ಸದಸ್ಯರ ಪರ ಮಾತನಾಡಿದರು. ಇದಕ್ಕೆ ಸಿಡಿಮಿಡಿಗೊಂಡ ಮಹೇಶ್ ಒಡೆಯರ್, ಜಿಪಂ ಅಧ್ಯಕ್ಷೆಯನ್ನು ಉದ್ದೇಶಿಸಿ, ನಿಮ್ಮನ್ನು ಶೃಂಗೇರಿ ಕ್ಷೇತ್ರದ ಶಾಸಕ ಖರೀದಿಸಿದ್ದಾರಾ? ಎಂದು ಪ್ರಶ್ನಿಸಿದರು. ಇದಕ್ಕೆ ಕುಪಿತರಾದ ಜಿಪಂ ಅಧ್ಯಕ್ಷೆ ಸುಜಾತಾ ಮಹೇಶ್ ಒಡೆಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತನ್ನನ್ನು ಯಾರೂ ಖರೀದಿಸಿಲ್ಲ. ತಾನೀಗಲೂ ಬಿಜೆಪಿಯಲ್ಲೇ ಇದ್ದೇನೆ. ಮಾತಿನಮೇಲೆ ಹಿಡಿತವಿರಲಿ ಎಂದು ತರಾಟೆಗೆ ಪಡೆದ ಘಟನೆ ನಡೆಯಿತು.
ಜಿಲ್ಲಾ ಪಂಚಾಯತ್ ಕಚೇರಿ ಯಾವುದೇ ಪಕ್ಷದ ಆಸ್ತಿಯಲ್ಲ. ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕು. ಆಡಳಿತ ಪಕ್ಷ ಬಿಜೆಪಿಯ ಜಿಪಂ ಸದಸ್ಯರು ಎರಡು ಬಾರಿ ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ. ಬುಧವಾರದ ಸಭೆಯಲ್ಲೂ ಆಡಳಿತ ಪಕ್ಷದ ಸದಸ್ಯರು ತಮ್ಮದೇ ಪಕ್ಷದ ಜಿಪಂ ಅಧ್ಯಕ್ಷೆಯ ರಾಜೀನಾಮೆಗಾಗಿ ಗದ್ದಲ ಎಬ್ಬಿಸಿದ್ದಾರೆ. ಕೊರೋನದಿಂದಾಗಿ ಸರಕಾರ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆ ಮಡುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೂ ಕ್ರಿಯಾಯೋಜನೆಗೆ ಅನುಮೋದನೆ ನೀಡದಿದ್ದಲ್ಲಿ ಬಂದ ಅನುದಾನವೂ ಹಿಂದಕ್ಕೆ ಹೋಗುತ್ತದೆ. ಬಿಜೆಪಿಯ ಆಡಳಿತದಿಂದಾಗಿ ಚಿಕ್ಕಮಗಳೂರು ಜಿಲ್ಲಾ ಪಂಚಯತ್ ತಲೆತಗ್ಗಿಸುವಂತಾಗಿದೆ.
- ಟಿ.ಡಿ.ರಾಜೇಗೌಡ, ಶಾಸಕ, ಶೃಂಗೇರಿ ಕ್ಷೇತ್ರಜಿಪಂ ಅಧ್ಯಕ್ಷೆಯ ರಾಜೀನಾಮೆ ವಿಚಾರ ಪಕ್ಷದ ಆಂತರಿಕ ವಿಚಾರವಾದರೂ ಆಡಳಿತ ಪಕ್ಷದ ಸದಸ್ಯರಿಗೆ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದ್ದಾಗ ಅಧ್ಯಕ್ಷೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪಕ್ಷದ ಸೂಚನೆ ಧಿಕ್ಕರಿಸಿ ಪಕ್ಷಕ್ಕೆ ದ್ರೋಹ ಮಾಡಬಾರದು. ಕ್ರಿಯಾ ಯೋಜನೆಗೆ ಅನುಮೋದನೆ ಸಭೆಯಲ್ಲಿ ಎಲ್ಲ ಸದಸ್ಯರು ಅನುಮೋದನೆ ನೀಡಿದ್ದು, ಇನ್ನಾದರೂ ಸುಜಾತಾ ಕೃಷ್ಣಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.
- ಬೆಳವಾಡಿ ರವೀಂದ್ರ, ಜಿಪಂ ಆಡಳಿತ ಪಕ್ಷದ ಸದಸ್ಯ, ಬಿಜೆಪಿ ಮುಖಂಡ







