ಇಂಧನ ಇಲಾಖೆಯ ಗುತ್ತಿಗೆ ಕಾರ್ಮಿಕರ ಕಾಯಂಗೆ ಆಗ್ರಹಿಸಿ ಧರಣಿ

ಬೆಂಗಳೂರು, ನ.18: ಇಂಧನ ಇಲಾಖೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ, ಜೊತೆಗೆ ಇಲಾಖೆಯ ಖಾಸಗೀಕರಣವನ್ನು ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಫೆಡರೇಷನ್(ಸಿಐಟಿಯು ಸಂಯೋಜಿತ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ಕ್ರಮವನ್ನು ಖಂಡಿಸಿದರು. ಯಾವುದೇ ಕಾರಣಕ್ಕೂ ಇಂಧನ ಇಲಾಖೆಯನ್ನು ಕಾರ್ಪೋರೇಟ್‍ಗಳಿಗೆ, ಖಾಸಗಿಯವರಿಗೆ ವಹಿಸಕೂಡದು ಎಂದು ಆಗ್ರಹಿಸಿದರು. ಸರಕಾರ ಇಂಧನ ಇಲಾಖೆಯಡಿ ಬರುವ ವಿದ್ಯುತ್ ಉತ್ಪಾದನೆ, ಪ್ರಸರಣ ಹಾಗೂ ವಿತರಣಾ ಕಂಪನಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್‍ನ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ, ಸರಕಾರವು ಇಂಧನ ಇಲಾಖೆಯನ್ನು ಸಮರ್ಥವಾಗಿ ನಡೆಸಲು ಸಾಧ್ಯವಾಗದೇ ಖಾಸಗಿಯವರ ಪಾಲು ಮಾಡಲು ಮುಂದಾಗಿದೆ. ಈ ಕ್ರಮ ಸರಿಯಲ್ಲ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಗುತ್ತಿಗೆ ಕಾರ್ಮಿಕರ ಬದುಕು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ವಿದ್ಯುತ್ ಕಂಪನಿಗಳ ಮೇಲೆ ಖಾಸಗೀಕರಣದಿಂದ ವಿದೇಶಿ ಹೂಡಿಕೆಗಳು ಹೆಚ್ಚಾಗುವ ಆತಂಕವಿದ್ದು, ಇದರಿಂದ ಶ್ರಮಿಕ ವರ್ಗದ ಮೇಲೆ ಗಂಭೀರ ಪರಿಣಾಮವಾಗಲಿದೆ. ದೇಶೀಯ ಸಂಸ್ಥೆಗಳ ಜನಮಾನಸದಿಂದ ದೂರ ಸರಿಯುವ ಸಾಧ್ಯತೆಗಳಿವೆ. ಇಂತಹ ಅನೇಕ ಕಾರಣಗಳಿಂದ ಕೇಂದ್ರ ಸರಕಾರ ಜನ, ನೌಕರರ ವಿರೋಧಿಗಳ ನಡುವೆ ಖಾಸಗೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.
ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಿದರೆ ಅನೇಕ ಗುತ್ತಿಗೆ ನೌಕರರು ಕೆಲಸ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ. ಸಾರ್ವಜನಿಕರು ಖಾಸಗೀಕರಣ ನೀತಿಯಿಂದ ಅನೇಕ ರೀತಿಯ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಂಧನ ಇಲಾಖೆಯಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು, ಸೇವಾ ಜೇಷ್ಠತೆ ಕೃಪಾಂಕ ನೀಡಬೇಕು. ವರ್ಗಾವಣೆ, ಬಡ್ತಿ ಮತ್ತು ನೇರ ನೇಮಕಾತಿಯ ಹೆಸರಿನಲ್ಲಿ 15-20 ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ರಕ್ಷಿಸಬೇಕು. ಕನಿಷ್ಠ ವೇತನ 21 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಜೆ.ಸತ್ಯಬಾಬು ಬಳ್ಳಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಿವಕುಮಾರ್ ಪಾಲ್ಗೊಂಡಿದ್ದರು.






.jpg)
.jpg)

