ವಿವಾದಾತ್ಮಕ ಕಾರ್ಯಕ್ರಮ ಪ್ರಸಾರಕ್ಕೆ 'ಸುದರ್ಶನ್ ಟಿವಿ'ಗೆ ಮತ್ತೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ, ನ.19: ವಿವಾದದ ದೊಡ್ಡ ಅಲೆಗಳನ್ನು ಎಬ್ಬಿಸಿದ್ದ ’ಬಿಂದಾಸ್ ಬೋಲ್’ ಸರಣಿಯ ಉಳಿಕೆ ಕಂತುಗಳನ್ನು ಪ್ರಸಾರ ಮಾಡಲು ಕೇಂದ್ರ ಸರ್ಕಾರ ಖಾಸಗಿ ಟಿವಿ ಚಾನಲ್ 'ಸುದರ್ಶನ್ ಟಿವಿ'ಗೆ ಅನುಮತಿ ನೀಡಿದೆ. ಆದರೆ ಸೂಕ್ತ ಬದಲಾವಣೆ ಮತ್ತು ಮಾರ್ಪಾಡುಗಳನ್ನು ಮಡಿದ ಬಳಿಕವಷ್ಟೇ ಕಾರ್ಯಕ್ರಮ ಪ್ರಸಾರ ಮಾಡಬಹುದಾಗಿದೆ ಎಂದು ಷರತ್ತು ವಿಧಿಸಿದೆ.
ಮುಸ್ಲಿಮರನ್ನು ಸರಕಾರಿ ಸೇವೆಗೆ ನುಸುಳಿಸಲಾಗುತ್ತಿದೆ ಎಂದು ಬಿಂಬಿಸಿದ 'ಯುಪಿಎಸ್ಸಿ ಜಿಹಾದ್' ಕಾರ್ಯಕ್ರಮ ಒಳ್ಳೆಯ ಅಭಿರುಚಿಯದ್ದಲ್ಲ ಹಾಗೂ ಕೋಮು ಭಾವನೆಯನ್ನು ಕೆರಳಿಸುವಂಥದ್ದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಭವಿಷ್ಯದಲ್ಲಿ ಸೂಕ್ತ ಜಾಗೃತೆ ವಹಿಸುವಂತೆ ಚಾನೆಲ್‌ಗೆ ಎಚ್ಚರಿಕೆ ನೀಡಲಾಗಿದೆ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.
ಉನ್ನತ ಸರಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸುವ ಕೇಂದ್ರ ಲೋಕಸೇವಾ ಆಯೋಗವನ್ನು ಕೂಡಾ 'ಯುಪಿಎಸ್ಸಿ ಜಿಹಾದ್' ಕಾರ್ಯಕ್ರಮದಲ್ಲಿ ಟೀಕಿಸಲಾಗಿತ್ತು. ಇದು ವ್ಯಾಪಕ ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಪ್ರಸಾರ ನಿಷೇಧಕ್ಕೆ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ದೇಶದ ಅತ್ಯುನ್ನತ ಕೋರ್ಟ್ ನಿಷೇಧ ಹೇರಿತ್ತು.
ಮೇಲ್ನೋಟಕ್ಕೆ ಚಾನಲ್, ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು, ನೋಟಿಸ್ ನೀಡಲಾಗಿದೆ ಎಂದು ಸರಕಾರ ಹೇಳಿತ್ತು. ಚಾನೆಲ್ ವಿರುದ್ಧ ಕಾನೂನು ಪ್ರಕಾರ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು.
ಆದರೆ ಚಾನಲ್ ಸಲ್ಲಿಸಿದ ಅಫಿಡವಿಟ್‌ನಲ್ಲಿ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದ್ದು, ಕಾರ್ಯಕ್ರಮ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿಲ್ಲ. ಒಂದು ಸಂಸ್ಥೆಯ ಚಟುವಟಿಕೆಗಳನ್ನಷ್ಟೇ ಬಿಂಬಿಸಿದೆ ಎಂದು ಸಮರ್ಥಿಸಿಕೊಂಡಿತ್ತು.







