ಎನ್‌ಕೌಂಟರ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಹತ, ಓರ್ವ ಯೋಧನಿಗೆ ಗಾಯ

ಜಮ್ಮು, ನ. 19: ನಗ್ರೋಟಾದ ಸಮೀಪ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬಾನ್ ಟೋಲ್ ಪ್ಲಾಝಾದ ಸಮೀಪ ಭದ್ರತಾ ಪಡೆಗಳು ಗುರುವಾರ ಬೆಳಗ್ಗೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಹತರಾಗಿದ್ದಾರೆ.
ಹತ್ಯೆಯಾದ ನಾಲ್ವರು ಶಂಕಿತ ಉಗ್ರರು ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಸದಸ್ಯರು. ಸಾಂಬಾ ಜಿಲ್ಲೆಯ ಅಂತರ್ ರಾಷ್ಟ್ರೀಯ ಗಡಿಯಲ್ಲಿ ಈ ಶಂಕಿತ ಉಗ್ರರು ಗಡಿ ಒಳ ನುಸುಳಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಶಸ್ತ್ರಾಸ್ತ್ರಗಳಿಂದ್ದ ಶಂಕಿತ ಉಗ್ರರು ನಿನ್ನೆ ಗಡಿಯಲ್ಲಿ ಒಳ ನುಸುಳಿದ್ದರು. ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಹಾಗೂ ಪಂಚಾಯತ್ ಉಪ ಚುನಾವಣೆಗೆ ಅಡ್ಡಿ ಉಂಟು ಮಾಡುವ ಉದ್ದೇಶವನ್ನು ಅವರು ಹೊಂದಿದ್ದರು ಎಂದು ಪೊಲೀಸ್ ಮಹಾ ನಿರ್ದೇಶಕ ದಲ್ಭಾಘ್ ಸಿಂಗ್ ಹೇಳಿದ್ದಾರೆ. ಮುಂಜಾನೆ 5 ಗಂಟೆಗೆ ಟೋಲ್ ಪ್ಲಾಝಾದಲ್ಲಿ ತಪಾಸಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ಟ್ರಕ್‌ನಲ್ಲಿ ಕುಳಿತಿದ್ದ ಶಂಕಿತರ ಉಗ್ರರು ಗ್ರೆನೇಡ್‌ಗಳನ್ನು ಎಸೆಯಲು ಆರಂಭಿಸಿದ ಬಳಿಕ ಎನ್‌ಕೌಂಟರ್ ನಡೆಯಿತು. ಟೋಲ್ ಪ್ಲಾಝಾದಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಎನ್‌ಕೌಂಟರ್ ನಡೆಸಿ ನಾಲ್ವರು ಉಗ್ರರನ್ನು ಹತ್ಯೆಗೈದರು. ಈ ಸಂದರ್ಭ ಉಗ್ರರು ತಮ್ಮೊಂದಿಗೆ ತಂದಿದ್ದ ದೊಡ್ಡ ಪ್ರಮಾಣದ ಸ್ಫೋಟಕ ಟ್ರಕ್‌ನ ಒಳಗೆ ಸ್ಫೋಟಗೊಂಡಿತು. ಎನ್‌ಕೌಂಟರ್‌ನಲ್ಲಿ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಕಾರ್ಯಾಚರಣೆ ತಂಡದ ಇಬ್ಬರು ಸಿಬ್ಬಂದಿ ಗಾಯಗೊಂಡರು. ಅವರನ್ನು ಅಕ್ನೂರ್‌ನ ಕುಲದೀಪ್ ರಾಜ್ (32) ಹಾಗೂ ನೀಲ್ ಖಾಸಿಮ್ ಬನಿಹಾಲ್ ರಾಂಬಾನ್‌ನ ಮುಹಮ್ಮದ್ ಇಸಾಕ್ ಮಲ್ಲಿಕ್ ಎಂದು ಗುರುತಿಸಲಾಗಿದೆ. ಇಬ್ಬರನ್ನು ಜಮ್ಮವಿನ ಜಿಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.





