ಭಾರತದ ತಂತ್ರಜ್ಞಾನ ಪರಿಹಾರಗಳನ್ನು ವಿದೇಶಗಳಿಗೆ ತಲುಪಿಸಲು ಇದು ಸಕಾಲ: ನರೇಂದ್ರ ಮೋದಿ
ಬೆಂಗಳೂರು ತಂತ್ರಜ್ಞಾನ ಮೇಳ ‘ಬಿಟಿಎಸ್2020’ ಉದ್ಘಾಟನೆ

ಬೆಂಗಳೂರು, ನ.19: ಭಾರತದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ಪರಿಹಾರಗಳನ್ನು ಜಗತ್ತಿನ ಬೇರೆ ದೇಶಗಳಿಗೆ ತಲುಪಿಸಲು ಇದು ಸೂಕ್ತ ಸಮಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ವರ್ಚುವಲ್ ಆಗಿ ನಡೆಯಲಿರುವ ಮೂರು ದಿನಗಳ 'ಬೆಂಗಳೂರು ತಂತ್ರಜ್ಞಾನ ಮೇಳ' (ಬಿಟಿಎಸ್-2020)ವನ್ನು ಗುರುವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
'ಡಿಜಿಟಲ್ ಇಂಡಿಯಾ' ಎಂಬುದು ಈಗ ಕೇವಲ ಸರ್ಕಾರದ ಅಭಿಯಾನವಾಗಿ ಉಳಿದಿಲ್ಲ. ಇದು ಬದುಕಿನ ರೀತಿಯೇ ಆಗಿ ಹೋಗಿದೆ. ಡಿಜಿಟಲ್ ತಂತ್ರಜ್ಞಾನವು ಜನರಿಗೆ ಪಾರದರ್ಶಕ ರೀತಿಯಲ್ಲಿ ತ್ವರಿತವಾಗಿ ಸೇವೆಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ, ನಿರ್ಲಕ್ಷಿತ ಸಮುದಾಯಗಳಿಗೆ ಹಾಗೂ ಸರ್ಕಾರಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಇದಕ್ಕಾಗಿ ನಾವು “ಡಿಜಿಟಲ್ ಇಂಡಿಯಾ”ಗೆ ಧನ್ಯವಾದ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಸೋಂಕಿನ ಸನ್ನಿವೇಶದಲ್ಲಿ ರೂಢಿಗೆ ಬಂದ “ಎಲ್ಲಿಂದಾದರೂ ಕೆಲಸ ಮಾಡಿ” ಎಂಬ ಪರಿಕಲ್ಪನೆಯು ಇನ್ನು ಮುಂದೆಯೂ ಉಳಿದುಕೊಳ್ಳಲಿದೆ. ಶಿಕ್ಷಣ, ಆರೋಗ್ಯಸೇವೆ, ಶಾಪಿಂಗ್ ಸೇರಿದಂತೆ ಹಲವು ವಲಯಗಳಲ್ಲಿ ತಂತ್ರಜ್ಞಾನದ ಆನ್ವಯಿಕತೆಯು ಹೆಚ್ಚಾಗಲಿದೆ. ಯಾವ ಬದಲಾವಣೆಯು ಈ ಮುಂಚೆ ಕನಿಷ್ಠ 10 ವರ್ಷಗಳನ್ನು ಹಿಡಿಯುತ್ತಿತ್ತೋ ಅದು ಕೋವಿಡ್ ಸನ್ನಿವೇಶದಲ್ಲಿ ತಾಂತ್ರಿಕ ಬಳಕೆಯಿಂದ ಕೆಲವೇ ತಿಂಗಳುಗಳಲ್ಲಿ ಆಗಿದೆ ಎಂದರು.
ಕೇಂದ್ರ ಸರ್ಕಾರವು ಪ್ರಪಂಚದ ಅತ್ಯಂತ ದೊಡ್ಡ ಆರೋಗ್ಯ ಸೇವಾ ಯೋಜನೆಯಾದ 'ಆಯುಷ್ಮಾನ್ ಭಾರತ'ವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ತಂತ್ರಜ್ಞಾನದ ಬಳಕೆಯಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕೋವಿಡ್ ಸಂಕಷ್ಟದ ವೇಳೆ ಕೋಟ್ಯಂತರ ಜನರಿಗೆ ಕೇವಲ ಒಂದು ಕ್ಲಿಕ್ ಮೂಲಕ ಆರ್ಥಿಕ ನೆರವು ಒದಗಿಸಲು ಸಾಧ್ಯವಾಯಿತು. ತಂತ್ರಜ್ಞಾನವು ಜನರನ್ನು ಒಗ್ಗೂಡಿಸುವಲ್ಲಿ ನೆರವಾಗಿದೆ ಎಂದು ಹೇಳಿದರು.
ಕಳೆದ ಎರಡು ತಿಂಗಳುಗಳಲ್ಲಿ 200 ಕೋಟಿ ವ್ಯವಹಾರಗಳು ಡಿಜಿಟಲ್ ಸ್ವರೂಪದಲ್ಲಿ ನಡೆದಿವೆ. ತಂತ್ರಜ್ಞಾನವು ರಕ್ಷಣಾ ಕೇತ್ರದ ವಿಕಸನಕ್ಕೆ ಎಡೆಮಾಡಿಕೊಡುತ್ತಿದೆ. ಮುಂಬರುವ ದಿನಗಳಲ್ಲಿ ಡ್ರೋನ್ ತಾಂತ್ರಿಕತೆಯು ಭೂದಾಖಲೆಗಳನ್ನು ನೀಡಲು ಅನುವು ಮಾಡಿಕೊಡಲಿದೆ. ಇದರಿಂದ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ ಎಂದು ಮೋದಿ ನುಡಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡುಗೆ ಬೆಳವಣಿಗೆಗೆ ಕೊಡುಗೆ ನೀಡಲು ಅಪರಿಮಿತ ಅವಕಾಶಗಳಿವೆ ಎಂದ ಪ್ರಧಾನಿ, ಮಾಹಿತಿ ತಂತ್ರಜ್ಞಾನ ವಲಯವು ನಮ್ಮ ಹೆಮ್ಮೆಗೆ ಕಾರಣವಾಗಿರುವುದು ಇದೇ ರೀತಿ ಮುಂದುವರಿಯಬೇಕು ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯವು ಉದ್ಯಮಿ ಸ್ನೇಹಿ ವಾತಾವರಣ ನಿರ್ಮಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಉದ್ದಿಮೆಗಳ ಬೆಳವಣಿಗೆಗೆ ಪೂರಕವಾದ ಕಾರ್ಯನೀತಿ ರೂಪಿಸುವ ಜೊತೆಗೆ ಭೂಕಾನೂನು ಮತ್ತು ಕಾರ್ಮಿಕ ಕಾನೂನುಗಳಲ್ಲಿ ಕೂಡ ಬದಲಾವಣೆಗಳನ್ನು ತಂದಿದೆ ಎಂದರು.
ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮಾತನಾಡಿದರು.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್, ಸ್ವೀಡನ್ ಉಪ-ರಾಷ್ಟ್ರಾಧ್ಯಕ್ಷ ಗಯ್ ಪರ್ಮಿಲಿನ್, ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ಸಮಿತಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಜೈವಿಕ ತಂತ್ರಜ್ಞಾನ ದೂರದರ್ಶಿತ್ವ ಸಮಿತಿಯ ಕಿರಣ್ ಮಜುಂದಾರ್ ಷಾ ಮಾತನಾಡಿದರು. ಐಟಿ/ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಭಾರಿ ಕೈಗಾರಿಕಾ ಸಚಿವ ಡಾ.ಜಗದೀಶ್ ಶೆಟ್ಟರ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಶಾಂತಿನಗರ ಶಾಸಕ ರಿಝ್ವಾನ್ ಅರ್ಷದ್, ನವೋದ್ಯಮ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್ ಟಿಪಿಐ ಮುಖ್ಯಸ್ಥ ಶೈಲೇಂದ್ರ ಕುಮಾರ್ ತ್ಯಾಗಿ, ಐಟಿ/ಬಿಟಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಮೀನಾ ನಾಗರಾಜ್ ವೇದಿಕೆಯಲ್ಲಿದ್ದರು.






.gif)
.gif)
.gif)
.gif)
.gif)
.gif)

