ಹುರುಳಿಸಾಲ್: ಭಟ್ಕಳ ಪುರಸಭೆಯ ನೂತನ ಅಧ್ಯಕ್ಷ-ಉಫಾಧ್ಯಕ್ಷರಿಗೆ ಸನ್ಮಾನ

ಭಟ್ಕಳ, ನ.19: ಮುಸ್ಲಿಮ್ ಬಹುಸಂಖ್ಯಾತ ಸದಸ್ಯ ಬಲ ಹೊಂದಿರುವ ಭಟ್ಕಳ ಪುರಸಭೆ ಮುಸ್ಲಿಮರ ಹಿಡಿತದಲ್ಲಿದೆ ಎನ್ನುವ ತಪ್ಪುಕಲ್ಪನೆ ಕೆಲವರಲ್ಲಿದೆ. ಪುರಸಭೆಯಲ್ಲಿನ ಅಭಿವೃದ್ಧಿ ಕಾರ್ಯಗಳು ಯಾವುದೇ ಜಾತಿ, ಧರ್ಮ, ಒಂದು ವರ್ಗಕ್ಕೆ ಸೇರದೆ ಇಡೀ ನಗರಕ್ಕೆ ಸೇರಿದ್ದಾಗಿರುತ್ತದೆ. ಆದ್ದರಿಂದ ಇಂತಹ ತಪ್ಪು ಕಲ್ಪನೆಗಳಿಂದ ಹೊರಬರಬೇಕಿದೆ ಎಂದು ಪುರಸಭೆಯ ನೂತನ ಅಧ್ಯಕ್ಷ ಮುಹಮ್ಮದ್ ಪರ್ವೇಝ್ ಕಾಶಿಂಜಿ ಹೇಳಿದ್ದಾರೆ.
ಹುರುಳಿಸಾಲ್ ಅಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಶಾಖಾಧ್ಯಕ್ಷ ಇಂಜಿನಿಯರ್ ನಝೀರ್ ಆಹ್ಮದ್ ಖಾಝಿ ಮಾತನಾಡಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆಯ ಉಪಾಧ್ಯಕ್ಷ ಖೈಸರ್ ಮೊಹ್ತೆಶಾಂ, ಅನುಭವಿ ಅಧ್ಯಕ್ಷರೊಂದಿಗೆ ಕೆಲಸ ಮಾಡುವ ಸೌಭಾಗ್ಯ ದೊರಕಿದೆ. ಇಬ್ಬರೂ ಸೇರಿ ಭಟ್ಕಳದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಮಾಸ್ಟರ್ ಗಿತ್ರೀಫ್ ರಿದಾ ಮಾನ್ವಿಯವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಮಾಅತೇ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಉಪಾಧ್ಯಕ್ಷ ಮುಜಾಹಿದ್ ಮುಸ್ತಫ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಬ್ದುಲ್ ರವೂಫ್ ಸವಣೂರು ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಯೂನೂಸ್ ರುಕ್ನುದ್ದೀನ್ ವಂದಿಸಿದರು.








