ಸಿಎಫ್‌ಐಯಿಂದ 'ಸ್ಕಾಲರ್ಶಿಪ್ ಕೊಡಿ' ವಿದ್ಯಾರ್ಥಿ ಆಂದೋಲನ
ಉಡುಪಿ, ನ.19: ವಿದ್ಯಾರ್ಥಿವೇತನ ಮಂಜೂರಾತಿಯಲ್ಲಿ ವಿಳಂಬ ಹಾಗೂ ಅವ್ಯವಸ್ಥೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಎಚ್‌ಡಿ, ಎಂಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ 'ಸ್ಕಾಲರ್ಶಿಪ್ ಕೊಡಿ' ವಿದ್ಯಾರ್ಥಿ ಆಂದೋಲನ ಉಡುಪಿ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಈ ಪ್ರಯುಕ್ತ ನ.21ರಂದು ಬೆಳಗ್ಗೆ 11ಗಂಟೆಗೆ ಮಣಿಪಾಲದ ಟಿ.ಉಪೇಂದ್ರ ಪೈ ಸ್ಮಾರಕ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಪ್ರತಿಭಟಿಸಲಾಗು ವುದು ಎಂದರು.
ಕೊರೋನದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದು ವರೆಸಲು ವಿದ್ಯಾರ್ಥಿವೇತನವನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿ ವೇತನದಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ಹಲವು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಸರಕಾರಕ್ಕೆ ಇರುವ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಅವರು ದೂರಿದರು.
ಸ್ಕಾಲರ್‌ಶಿಪ್ ವ್ಯವಸ್ಥೆಯನ್ನು ಸರಕಾರ ಸರಳೀಕೃತಗೊಳಿಸಬೇಕು. ಬಾಕಿ ಇರುವ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಬೇಕು. ಮಂಜೂರಾಗದೆ ಬಾಕಿ ಇರುವ ಎಲ್ಲ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆ ಗೊಳಿಸಬೇಕು. ಕಡಿತಗೊಳಿಸಿರುವ ಪಿಎಚ್‌ಡಿ ಫೆಲೋಶಿಪ್ ಆದೇಶವನ್ನು ಹಿಂಪಡೆಯಬೇಕು. ದುರುಪಯೋಗವಾಗುತ್ತಿರುವ ವಿದ್ಯಾರ್ಥಿ ವೇತನದ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಶೇಕ್, ಕುಂದಾಪುರ ಅಧ್ಯಕ್ಷ ಝಿಶಾನ್ ಕುಂದಾಪುರ, ಜಿಲ್ಲಾ ಉಪಾಧ್ಯಕ್ಷೆ ಝಂಝಂ, ಮುಖಂಡ ಉಸಾಮ ಗಂಗೊಳ್ಳಿ ಉಪಸ್ಥಿತರಿದ್ದರು.







