ಸಿಎಂ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು, ನ. 19: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪನವರು ನಿರ್ಧಾರ ಮಾಡಲಿದ್ದು, ಅವರ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ನೇತೃತ್ವದ ಸರಕಾರದ ಸಚಿವ ಸಂಪುಟ ಹೇಗಿರಬೇಕು ಎಂಬುದನ್ನ ಸಿಎಂ ತೀರ್ಮಾನಿಸುತ್ತಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಪರಮಾಧಿಕಾರ. ಹೀಗಾಗಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧರಿಸಲಿದ್ದಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ನಿನ್ನೆ ಹೊಸದಿಲ್ಲಿಗೆ ತೆರಳಿದ್ದರು. ವರಿಷ್ಟರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿಎಂ ಏನೇ ತೀರ್ಮಾನ ಕೈಗೊಂಡರು ಅದಕ್ಕೆ ನಾವು ಬದ್ಧ ಎಂದು ಪುನರುಚ್ಚರಿಸಿದರು.
ಗೊಂದಲ್ಲವಿಲ್ಲ: ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ, ಕೆಲ ಶಾಸಕರು ಪ್ರತ್ಯೇಕ ಸಭೆ ನಡೆಸಿಲ್ಲ. ಸ್ವಾಭಾವಿಕವಾಗಿ ಅವರು ನಾಲ್ಕು ಜನ ಸೇರಿದರೆ ಮಾಧ್ಯಮ ಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿದರೂ ಎಂದು ಹೇಳುತ್ತಾರೆ. ಆದರೆ, ಶಾಸಕರು ನಾವು ಒಟ್ಟಿಗೆ ಕೂತು ಸಮಾಲೋಚನೆ ನಡೆಸಿದ್ದೇವೆ ಎಂದು ಸ್ಪಷ್ಟಣೆ ನೀಡಿದ್ದಾರೆ. ಹೀಗಾಗಿ ಇಂತಹ ಸಭೆಗಳಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಖಾತೆ ಬದಲಾವಣೆ: ಕೋಟ ಶ್ರೀನಿವಾಸ ಪೂಜಾರಿ ಅವರ ಖಾತೆ ಬದಲಾವಣೆ ಆಗುತ್ತದೇಯೇ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ನೀವು ಏನೇ ಪ್ರಶ್ನೆ ಕೇಳಿದರೂ ನನ್ನದು ಒಂದೇ ಉತ್ತರ. ಪಕ್ಷ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಸದಾ ಬದ್ಧ ಎಂದು ಸ್ಪಷ್ಟಪಡಿಸಿದರು.







