ವಿಧಾನ ಪರಿಷತ್ ನೂತನ ಸದಸ್ಯರಾಗಿ ಪುಟ್ಟಣ್ಣ, ನಮೋಶಿ, ಚಿದಾನಂದಗೌಡ, ಸಂಕನೂರ ಪ್ರಮಾಣ ವಚನ

ಬೆಂಗಳೂರು, ನ. 19: ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಪುಟ್ಟಣ್ಣ, ಶಶೀಲ್ ನಮೋಶಿ, ಕೆ.ಚಿದಾನಂದ ಗೌಡ ಹಾಗೂ ಎಸ್.ವಿ.ಸಂಕನೂರ ಅವರು ಮೇಲ್ಮನೆ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ನಾಲ್ವರು ನೂತನ ಸದಸ್ಯರಿಗೆ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಪ್ರಮಾಣ ವಚನವನ್ನು ಬೋಧನೆ ಮಾಡಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶೀಲ್ ಜಿ.ನಮೋಶಿ, ಪಶ್ಚಿಮ ಪದವೀಧರರ ಕ್ಷೇತ್ರದಿಂದ ಎಸ್.ವಿ. ಸಂಕನೂರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕೆ. ಚಿದಾನಂದ ಗೌಡ ವಿಧಾನ ಪರಿಷತ್ ನೂತನ ಸದಸ್ಯರಾಗಿದ್ದು, ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಎ.ವೈ. ನಾರಾಯಣಸ್ವಾಮಿ, ಮಹಾಂತೇಶ್ ಕವಟಗಿಮಠ, ಸಂಸದ ಉಮೇಶ್ ಜಾಧವ್, ನೂತನ ಸದಸ್ಯರ ಬೆಂಬಲಿಗರು ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.





