ಯಾವುದೇ ಮಾರಕಾಸ್ತ್ರ ಸಿಕ್ಕಿಲ್ಲ: ಎಸ್‌ಡಿಪಿಐ
ಎನ್‌ಐಎ ದಾಳಿ ಪ್ರಕರಣ
ಬೆಂಗಳೂರು, ನ.19: ಡಿಜೆ-ಕೆಜಿ ಹಳ್ಳಿ ಗಲಬೆ ಪ್ರಕರಣ ಸಂಬಂಧ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ತನಿಖಾಧಿಕಾರಿಗಳ ದಾಳಿ ವೇಳೆ ಯಾವುದೇ ರೀತಿಯ ಮಾರಕಾಸ್ತ್ರಗಳು ಸಿಕ್ಕಿಲ್ಲ ಎಂದು ಎಸ್‌ಡಿಪಿಐ ಸ್ಪಷ್ಟೀಕರಣ ನೀಡಿದೆ.
ಗುರುವಾರ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ಪಕ್ಷ ಹಾಗೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ತನಿಖೆ ನೆಪವೊಡ್ಡಿ ನಮ್ಮ ಪಕ್ಷದ ವಾರ್ಡ್ ಕಚೇರಿ ಮೇಲೆ ದಾಳಿ ಮಾಡಿದಲ್ಲದೇ, ಮಾರಕಾಸ್ತ್ರಗಳು ಸಿಕ್ಕಿವೆ ಎಂದು ಮಾಧ್ಯಮಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರಿದರು.
ನಮ್ಮ ಪಕ್ಷದ ಬೆಳವಣಿಗೆಗೆ ತಡೆಯೊಡ್ಡುವ ಹೇಯ ಕೃತ್ಯಕ್ಕೆ ತನಿಖಾ ಸಂಸ್ಥೆ ಕೈಹಾಕಿದೆ. ಅಲ್ಲದೆ, ತನಿಖಾ ಸಂಸ್ಥೆ ನೈಜತೆಯನ್ನು ಮರೆಮಾಚಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ಪಕ್ಷದ ಕುರಿತು ಸಮಾಜಕ್ಕೆ ತಪ್ಪುಸಂದೇಶ ನೀಡುವ ತನ್ನ ಪ್ರಯತ್ನಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿದ್ದೇವೆ ಎಂದು ಹೇಳಿದರು.
ಈ ಗಲಬೆ ಘಟನೆಯ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂಬುವುದಕ್ಕೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನವೇ ಸಾಕ್ಷಿ ಎಂದ ಅವರು, ಸಂಪತ್‌ರಾಜ್ ಅವರ ರಾಜಕೀಯ ವೈಷಮ್ಯಕ್ಕೆ ಈಗಾಗಲೇ ಬಲಿಪಶುಗಳಾಗಿ ಅನೇಕ ಅಮಾಯಕರು ಜೈಲಿನಲ್ಲಿದ್ದಾರೆ. ಈ ಎಲ್ಲ ವಾಸ್ತವಂಶ ಗೊತ್ತಿರುವ ತನಿಖಾ ಸಂಸ್ಥೆ ಸರಕಾರದ ಒತ್ತಡಕ್ಕೆ ಮಣಿದು ಬಿಜೆಪಿಯ ಸೈದ್ಧಾಂತಿಕ ವಿರೋಧಿಯಾದ ಎಸ್‌ಡಿಪಿಐ ಪಕ್ಷವನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದರು.







