ದಿಲ್ಲಿಯಿಂದ ಸ್ವಲ್ಪ ಸಮಯ ದೂರ ಉಳಿಯಲು ಸೋನಿಯಾಗೆ ವೈದ್ಯರ ಸಲಹೆ

ಹೊಸದಿಲ್ಲಿ, ನ. 20: ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೀರ್ಘಕಾಲದಿಂದ ಎದೆಯ ಸೋಂಕಿನಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರಿಗೆ ಹೊಸದಿಲ್ಲಿ ತೊರೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಕೆಲವು ದಿನಗಳ ಕಾಲ ಗೋವಾ ಅಥವಾ ಚೆನೈಗೆ ತೆರಳಲಿದ್ದಾರೆ. ಅವರೊಂದಿಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತೆರಳಲಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.
ಕಳೆದ ಆಗಸ್ಟ್‌ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಸೋನಿಯಾ ಗಾಂಧಿ ಅವರು ನಿಯಮಿತವಾಗಿ ಔಷಧಗಳನ್ನು ಸೇವಿಸುತ್ತಿದ್ದರು. ಈಗ ಹೊಸದಿಲ್ಲಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ ವೈದ್ಯರು ಸೋನಿಯಾ ಗಾಂಧಿ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ದಿಲ್ಲಿಯ ವಾಯು ಮಾಲಿನ್ಯ ಸೋನಿಯಾ ಗಾಂಧಿ ಅವರಲ್ಲಿ ಅಸ್ತಮಾ ಹಾಗೂ ಎದೆಯ ಸೋಂಕನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ, ದಿಲ್ಲಿ ತ್ಯಜಿಸಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





