ಸುಬ್ರತಾ ರಾಯ್ 62,600 ಕೋ.ರೂ. ಪಾವತಿಸಲು ನಿರ್ದೇಶಿಸಬೇಕೆಂದು ಕೋರಿ ಸುಪ್ರೀಂ ಮೊರೆ ಹೋದ ಸೆಬಿ

ಹೊಸದಿಲ್ಲಿ,ನ.20: ಹೂಡಿಕೆದಾರರಿಗೆ ಬಾಕಿಯಿಟ್ಟಿರುವ 62,600 ಕೋ.ರೂ.ಗಳನ್ನು ಪಾವತಿಸುವಂತೆ ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ಮತ್ತು ಅವರ ಎರಡು ಕಂಪನಿಗಳಿಗೆ ನಿರ್ದೇಶ ನೀಡುವಂತೆ ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲರಾದರೆ ರಾಯ್ ಅವರ ಜಾಮೀನು ರದ್ದುಗೊಳಿಸುವಂತೆ ಅದು ಕೋರಿದೆ.
2012 ಮತ್ತು 2015ರಲ್ಲಿ ನ್ಯಾಯಾಲಯವು ಆದೇಶಿಸಿದ್ದರೂ ಹೂಡಿಕೆದಾರರಿಂದ ಸಂಗ್ರಹಿಸಿದ್ದ ಸಂಪೂರ್ಣ ಹಣವನ್ನು ಶೇ.15 ವಾರ್ಷಿಕ ಬಡ್ಡಿಯೊಂದಿಗೆ ಠೇವಣಿಯಿರಿಸಲು ಸಹಾರಾ ವಿಫಲಗೊಂಡಿದೆ. ಅದು ಭಾಗಶಃ ಅಸಲು ಹಣವನ್ನು ಮಾತ್ರ ಪಾವತಿಸಿದ್ದು,ಬಡ್ಡಿಯ ಮೊತ್ತವು 62,600 ಕೋ.ರೂ.ಗಳಿಗೇರಿದೆ ಎಂದು ತಿಳಿಸಿರುವ ಸೆಬಿ, ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ಸಹಾರಾ ಗ್ರೂಪ್ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ ಎಂದು ಹೇಳಿದೆ.
ತನ್ಮಧ್ಯೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಹಾರಾ ವಕ್ತಾರರು,ಕಂಪನಿಯು ಈಗಾಗಲೇ 22,000 ಕೋ.ರೂ.ಗಳನ್ನು ಠೇವಣಿಯಿರಿಸಿದೆ. ಬಡ್ಡಿಯನ್ನು ಹೆಚ್ಚಿಸುವ ಮೂಲಕ ಸೆಬಿ ಕುಚೇಷ್ಟೆ ಮಾಡುತ್ತಿದೆ ಎಂದು ಆರೋಪಿಸಿದರು.
ಹೂಡಿಕೆದಾರರಿಗೆ 24,000 ಕೋ.ರೂ.ಗಳ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾರಾ ಗ್ರೂಪ್ ಸೆಬಿ ಜೊತೆ ಸುದೀರ್ಘ ಕಾನೂನು ಸಮರದಲ್ಲಿ ಸಿಕ್ಕಿಕೊಂಡಿದೆ. ರಾಯ್ ಅವರನ್ನು 2014ರಲ್ಲಿ ಬಂಧಿಸಲಾಗಿತ್ತಾದರೂ 2016ರಿಂದ ಅವರು ಜಾಮೀನಿನಲ್ಲಿ ಹೊರಗಿದ್ದಾರೆ.







