ಚಿನ್ನ ಕಳ್ಳ ಸಾಗಾಟ ಪ್ರಕರಣ: ಕೇರಳ ಸಿಎಂ ವಿರುದ್ಧ ಹೇಳಿಕೆ ನೀಡಲು ಆರೋಪಿಗಳ ಮೇಲೆ ಈಡಿ ಒತ್ತಡ; ಆರೋಪ
ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್
ಸ್ವಪ್ನಾ ಸುರೇಶ್
ಹೊಸದಿಲ್ಲಿ: ಕೇರಳ ಚಿನ್ನ ಸಾಗಾಟ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಒಬ್ಬ ಅನಾಮಿಕ ವ್ಯಕ್ತಿಯ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ‘ಸೋರಿಕೆಯಾದ’ ಧ್ವನಿಮುದ್ರಿಕೆಯೊಂದು ವಿವಾದ ಸೃಷ್ಟಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಸ್ವಪ್ನಾಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎನ್ನಲಾದ ಅನಾಮಿಕ ವ್ಯಕ್ತಿಗಳು ಬಲವಂತಪಡಿಸುತ್ತಿದ್ದಾರೆಂದು ಈ ದೂರವಾಣಿ ಸಂಭಾಷಣೆ ಸೂಚಿಸುತ್ತದೆ ಎಂದು thehindu.com ವರದಿ ಮಾಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಮುಖ್ಯ ಕಾರ್ಯದರ್ಶಿ ಎಂ ಶಿವಶಂಕರ್ ಅವರ ಮೇಲೆ ಆರೋಪ ಹೊರಿಸಿ ಸ್ವಪ್ನಾ ಸುರೇಶ್ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿದಾರ (ಅಪ್ರೂವರ್) ಆಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎನ್ನಲಾದ ವ್ಯಕ್ತಿಗಳು ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮುಖ್ಯಮಂತ್ರಿಯನ್ನು ಪ್ರತಿನಿಧಿಸುತ್ತಿದ್ದ ಶಿವಶಂಕರ್ ಜತೆ ತಾನು ಯುಎಇಗೆ ಹೋಗಿದ್ದೆ ಎಂದು ಹೇಳಿದರೆ ತನ್ನನ್ನು ಮಾಫಿ ಸಾಕ್ಷಿದಾರರಾಗಿ ಮಾಡಲಾಗುವುದು ಎಂದು ಸ್ವಪ್ನಾ ಸುರೇಶ್ ಹೇಳುತ್ತಿರುವುದು ದೂರವಾಣಿ ಸಂಭಾಷಣೆಯ ಧ್ವನಿಮುದ್ರಣದಲ್ಲಿ ಕೇಳಿಸುತ್ತದೆ ಎಂದು ವರದಿಯಾಗಿದೆ. ತನಗೆ ತನ್ನದೇ ಹೇಳಿಕೆಯನ್ನು ಓದಲು ಅಧಿಕಾರಿಗಳು ಅನುಮತಿಸಿಲ್ಲ ಹಾಗೂ ಸಹಿ ಹಾಕುವಂತೆ ಮಾಡಿದ್ದಾರೆ ಎಂದೂ ಮಹಿಳೆಯೊಬ್ಬರು ಹೇಳುತ್ತಿರುವುದು ಕೇಳಿಸುತ್ತದೆ. ಈ ಧ್ವನಿ ಸ್ವಪ್ನಾ ಸುರೇಶ್ ರದ್ದು ಎಂದು ಹೇಳಲಾಗುತ್ತಿದೆ.
ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಸ್ವಪ್ನಾ ಮತ್ತು ಶಿವಶಂಕರ್ ಇಬ್ಬರೂ ಸದ್ಯ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣ ಬಳಸಿ ಮುಖ್ಯಮಂತ್ರಿ ಮೇಲೆ ಆರೋಪ ಹೊರಿಸಲು ಜಾರಿ ನಿರ್ದೇಶನಾಲಯ ಯತ್ನಿಸುತ್ತಿದೆ ಎಂದು ಎಲ್ಡಿಎಫ್ ಆರೋಪಿಸುತ್ತಿದೆ.
ತಾವು ಸಿಎಂ ವಿರುದ್ಧ ಹೇಳಿಕೆ ನೀಡಲು ನಿರಾಕರಿಸಿದ್ದರಿಂದ ತಮ್ಮನ್ನು ಕಸ್ಟಡಿಯಲ್ಲಿರಿಸಲಾಗಿದೆ ಎಂದು ಈ ವಾರ ಜಾಮೀನು ನಿರಾಕರಿಸಲ್ಪಟ್ಟ ಶಿವಶಂಕರ್ ಹೇಳಿದ್ದಾರೆ. ಈ ಧ್ವನಿಮುದ್ರಣದ ಸತ್ಯಾಸತ್ಯತೆಯನ್ನು ಕೇರಳ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತಾನು ಜೈಲಿನಲ್ಲಿರುವಾಗ ಈ ಮಾತುಕತೆ ನಡೆದದ್ದಲ್ಲ, ಬದಲಾಗಿ ತನಿಖಾಧಿಕಾರಿಗಳ ಕಸ್ಟಡಿಯಲ್ಲಿರುವಾಗ ಈ ಸಂಭಾಷಣೆ ನಡೆದಿತ್ತು ಎಂದು ಸ್ವಪ್ನಾ ಹೇಳಿದ್ದರೆಂದು ವರದಿಯಾಗಿದೆ.
ತನಿಖೆಯ ದಾರಿ ತಪ್ಪಿಸಲು ಈ ಧ್ವನಿಮುದ್ರಿಕೆಯನ್ನು ಸರಕಾರ ಬಳಸುತ್ತಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿವೆ. ಇದರ ಹಿಂದೆ ಸಿಎಂ ಕಚೇರಿಯ ಕೈವಾಡವಿದೆ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಆರೋಪಿಸಿದ್ದಾರೆ.
ಈ ನಡುವೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ನಿಗದಿತ ಎರಡು ವರ್ಷಗಳ ಅವಧಿಯನ್ನು ಕೇಂದ್ರ ಸರಕಾರ ಇನ್ನೊಂದು ವರ್ಷ ವಿಸ್ತರಿಸಿದೆ. ಹಲವಾರು ವಿಪಕ್ಷ ನಾಯಕರುಗಳ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಮಿಶ್ರಾ ನಡೆಸುತ್ತಿದ್ದಾರೆ.