ಕಾಶ್ಮೀರ: ಹಿಮಪಾತಕ್ಕೆ ಸಿಲುಕಿದ್ದ 19 ಜನರ ರಕ್ಷಣೆ
ಜಮ್ಮು, ನ.20: ದಕ್ಷಿಣ ಕಾಶ್ಮೀರದ ಶೋಫಿಯಾನ್ ಬಳಿ ಮುಘಲ್ ರಸ್ತೆಯಲ್ಲಿ ಹಿಮಪಾತಕ್ಕೆ ಸಿಲುಕಿದ್ದ 19 ಜನರನ್ನು ಭದ್ರತಾ ಪಡೆಗಳು ರಕ್ಷಿಸಿವೆ ಎಂದು ವರದಿಯಾಗಿದೆ. ಶೋಫಿಯಾನ್ ಮತ್ತು ಪೂಂಚ್ ಜಿಲ್ಲೆಯನ್ನು ಸಂಪರ್ಕಿಸುವ ಮುಘಲ್ ರಸ್ತೆಯ ಪೀರ್ ಕಿ ಗಲಿ ಪ್ರದೇಶದಲ್ಲಿ ಗುರುವಾರ ಹಿಮಪಾತ ಸಂಭವಿಸಿದೆ. ಶೋಫಿಯಾನ್‌ನಿಂದ ಪೂಂಚ್‌ನತ್ತ 3 ಕಾರುಗಳಲ್ಲಿ ಮಹಿಳೆಯರು, ಮಕ್ಕಳ ಸಹಿತ 19 ಜನರು ಪ್ರಯಾಣಿಸುತ್ತಿದ್ದಾಗ ಹಿಮಪಾತ ಸಂಭವಿಸಿದ್ದು ಕಾರು ಹಿಮಗಡ್ಡೆಯ ಮಧ್ಯೆ ಸಿಲುಕಿಕೊಂಡಿದೆ.
ಗುರುವಾರ ಮಧ್ಯರಾತ್ರಿಯ ಬಳಿಕ ಪೊಲೀಸ್ ಮತ್ತು ಸೇನಾ ಪಡೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಇವರೆಲ್ಲರನ್ನೂ ರಕ್ಷಿಸಿ ಪಗಾಣ್‌ನ ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೂಂಚ್ ಜಿಲ್ಲಾ ಹಿರಿಯ ಪೊಲೀಸ್ ಅಧೀಕ್ಷಕ ರಮೇಶ್ ಕುಮಾರ್ ಅಂಗ್ರಾಲ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿರುವುದರಿಂದ ಮುಘಲ್ ರಸ್ತೆಯಲ್ಲಿ ಪ್ರಯಾಣಿಸಬಾರದೆಂದು ಅವರು ಜನರಿಗೆ ಸಲಹೆ ನೀಡಿದ್ದಾರೆ.
Next Story





