ಸಂಬಳ ನೀಡಿ, ಇಲ್ಲವೇ ಪ್ರಾಣ ಬಿಡಲು ಅನುಮತಿ ಕೊಡಿ: ಅತಿಥಿ ಉಪನ್ಯಾಸಕರ ಅಳಲು
ಬೆಂಗಳೂರು, ನ.20: ಲಾಕ್‍ಡೌನ್ ನಂತರದಿಂದ ಸಂಬಳವಿಲ್ಲದೇ ಪರದಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕೂಡಲೇ ಸಂಬಳ ಕೊಡಿ, ಇಲ್ಲದಿದ್ದರೆ ಪ್ರಾಣ ಬಿಡಲು ಅನುಮತಿ ಕೊಡಿ ಎಂದು ಅತಿಥಿ ಉಪನ್ಯಾಸಕರ ಸಂಘವು ಅಸಮಾಧಾನ ವ್ಯಕ್ತಪಡಿಸಿದೆ ತಿಳಿಸಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕ ಚನ್ನಬಸಪ್ಪ ರೇವಡಿ, ಸರಿಯಾಗಿ ಸಂಬಳ ಸಿಗದೆ 23 ಜನ ಉಪನ್ಯಾಸಕರು ಜೀವ ಬಿಟ್ಟಿದ್ದಾರೆ, ನಿಮಗೆ ಇನ್ನೆಷ್ಟು ಜೀವ ಬೇಕು ಎಂದು ಪ್ರಶ್ನಿಸಿದರು. ಅನೇಕ ವರ್ಷಗಳಿಂದ ಕೇವಲ 10 ಸಾವಿರ ಸಂಬಳಕ್ಕೆ ಜೀತದಾಳುಗಳಂತೆ ದುಡಿಯುತ್ತಿದ್ದೇವೆ. ನಾವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ನಮ್ಮ ಭವಿಷ್ಯವೇ ಹಾಳಾಗಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕ ಎಲ್.ಎನ್.ರೆಡ್ಡಿ ಮಾತನಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ಕೈಹಿಡಿಯದ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿ ಸಂಬಳ ನೀಡಿ ಎಂದು ಹೇಳಿ ನಮಗೆ ಮೋಸ ಮಾಡುತ್ತಿದೆ. ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿದ್ದು ಮತ್ತೆ ನಮ್ಮನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ ಅವರು ವಚನ ಭ್ರಷ್ಟರಾಗಿದ್ದಾರೆ ಎಂದರು.





