ಮಕ್ಕಳಿಗಾಗಿ ಆಸ್ತಿ ಮಾಡಬೇಡಿ; ಮಕ್ಕಳನ್ನೇ ಆಸ್ತಿ ಮಾಡಿ: ಪಿಎಸ್ಸೈ ಮಂಜುಳಾ

ಮಂಗಳೂರು, ನ.20: ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ಬಾರಿಯಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ; ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಮಂಜುಳಾ ಸಲಹೆ ನೀಡಿದ್ದಾರೆ.
ವಾಮಂಜೂರಿನ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳಜೋತ್ಯಿ ಸಮಗ್ರ ಶಾಲೆಯಲ್ಲಿ ಚೈಲ್ಡ್ ಲೈನ್ ಮಂಗಳೂರು ಸಂಸ್ಥೆಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ ‘ಚೈಲ್ಡ್ ಲೈನ್ ಸೆ ದೋಸ್ತಿ ವೀಕ್’ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾದರೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ಪೊಲೀಸ್ ಇಲಾಖೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಬಹುದು. ಮಕ್ಕಳು ಸಂಕಷ್ಟದಲ್ಲಿದ್ದಾಗ ಕೂಡಲೇ 1098 ಸಂಖ್ಯೆಗೆ ಕರೆ ಮಾಡಬೇಕು ಎಂದು ಹೇಳಿದರು.
ಚೈಲ್ಡ್ ಲೈನ್ ನಿರ್ದೇಶಕ ರೆನ್ನಿ ಡಿಸೋಜ ‘ಚೈಲ್ಡ್ ಲೈನ್ ಸೆ ದೋಸ್ತಿ ವೀಕ್’ ಸಪ್ತಾಹದ ಮೂಲಕ ವಿವಿಧ ಇಲಾಖೆ, ಮಕ್ಕಳು ಮತ್ತು ಸಮುದಾಯಕ್ಕೆ ಜನಜಾಗೃತಿ ಮೂಡಿಸಿದ ಕಾರ್ಯಕ್ರಮದ ವೀಡಿಯೊ ಚಿತ್ರಣ ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳ ಜ್ಯೊತಿ ಸಮಗ್ರ ಶಾಲೆ ಆಡಳಿತಾಧಿಕಾರಿ ಗಣೇಶ್ ಭಟ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಚೈಲ್ಡ್ ಲೈನ್ ನಗರ ಸಂಯೋಜಕ ಸಿಸ್ಟರ್ ಹಿಲರಿಯ, ಸುಳ್ಯ ಶಿಕ್ಷಣ ಸಂಪನೂಲ್ಮ ಕೇಂದ್ರದ ಮಾಧವ ಗೌಡ, ಪಡಿ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಚೈಲ್ಡ್ ಲೈನ್ ಸದಸ್ಯೆ ರೇವತಿ ಕಾರ್ಯಕ್ರಮ ನಿರೂಪಿಸಿದರು. ಮಂಗಳ ಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಸ್ವಾಗತಿಸಿದರು. ಚೈಲ್ಡ್ ಲೈನ್ ಸದಸ್ಯೆ ಜಯಂತಿ ವಂದಿಸಿದರು.







