‘ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ’ ಕೃತಿ ಬಿಡುಗಡೆ

ಮಂಗಳೂರು, ನ.20: ಸಂಭೋದನೆ ಅಥವಾ ಸಂವಹನವಲ್ಲದೆ ಸಾಹಿತ್ಯ ಕೃತಿ ರಚನೆಯಲ್ಲೂ ವ್ಯಾಕರಣಬದ್ಧವಾದ ಭಾಷಾ ಶುದ್ಧತೆ ಅತ್ಯಂತ ಪ್ರಮುಖವಾದುದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಹೇಳಿದರು.
ಲೇಖಕ ಎಚ್. ಶಾಂತರಾಜ ಐತಾಳರ ಕೃತಿ ‘ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಭಾಷಾ ಶುದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಐತಾಳರು ತನ್ನ ನಿವೃತ್ತಿ ಜೀವನವನ್ನು ಸಾಹಿತ್ಯ ಕೃತಿ ರಚಿಸಲು ಅದರಲ್ಲೂ ಪ್ರಮುಖವಾಗಿ ಪರಿಸರ, ಬಳಕೆದಾರರ ಜಾಗೃತಿ, ಪ್ರವಾಸ ಕಥನ, ಆಡಳಿತಾತ್ಮಕ ಲೋಪಗಳು ಮತ್ತು ಅಭಿವೃದ್ಧಿ ಪರ ಚಿಂತನೆಗೆ ತೊಡಗಿಸಿಕೊಂಡು ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದನ್ನು ಶ್ಲಾಘನೀಯ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಎಡಪಡಿತ್ತಾಯ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತಿಯ ವಾಸುದೇವ ಭಟ್ ಪೆರಂಪಳ್ಳಿ ಕೃತಿ ಪರಿಚಯ ಮಾಡಿದರು.
ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಕಾರ್ಪೊರೇಟರ್ ಶಕಿಲಾ ಕಾವ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ರಜನಿ ಶೆಣೈ ಉಪಸ್ಥಿತರಿದ್ದರು.
ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಡಾ. ಸಪ್ನಾ ಉಕ್ಕಿನಡ್ಕ ವಂದಿಸಿದರು. ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.







