ಯು.ಕೆ. ಸಚಿವ ತಾರೀಖ್ ಅಹ್ಮದ್ ಜೊತೆ ಮುಖ್ಯಮಂತ್ರಿ ವರ್ಚುವಲ್ ಸಭೆ

ಬೆಂಗಳೂರು, ನ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಯುನೈಟೆಡ್ ಕಿಂಗ್‍ಡಂ(ಯು.ಕೆ)ನ ವಿದೇಶಿ, ಕಾಮನ್‍ವೆಲ್ತ್ ಮತ್ತು ಅಭಿವೃದ್ಧಿ ಸಚಿವ ಲಾರ್ಡ್ ತಾರೀಖ್ ಅಹ್ಮದ್ ಅವರೊಂದಿಗೆ ವರ್ಚುಯಲ್ ಸಭೆ ನಡೆಸಿದರು.
ನವೀಕರಿಸಬಹುದಾದ ಇಂಧನ, ಮಾಲಿನ್ಯ ನಿಯಂತ್ರಣ, ಅನಿಮೇಷನ್/ಗೇಮಿಂಗ್, ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಮತ್ತು ಸಹಭಾಗಿತ್ವದ ಕುರಿತಂತೆ ಅವರು ಚರ್ಚಿಸಿದರು.
ಕರ್ನಾಟಕ ರಾಜ್ಯವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿದೆ. ಕೌಶಲ್ಯಯುಕ್ತ ಮಾನವ ಸಂಪನ್ಮೂಲದ ಜೊತೆಗೆ ಇನ್ನಿತರ ಅನುಕೂಲಕರ ವಾತಾವರಣದಿಂದಾಗಿ ಜಾಗತಿಕ ಮಟ್ಟದ ಉದ್ಯಮಗಳಿಗೆ ಕರ್ನಾಟಕ ಹೂಡಿಕೆಗೆ ಪ್ರಮುಖ ಸ್ಥಳವಾಗಿದೆ ಎಂದ ಮುಖ್ಯಮಂತ್ರಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ಬ್ರಿಟನ್ನಿನೊಂದಿಗೆ ಮುನ್ಸೂಚನೆ ಹಾಗೂ ಪೂರಕ ಪರಿಹಾರಗಳನ್ನು ಕಂಡುಕೊಳ್ಳಲು ಉತ್ಸುಕವಾಗಿದೆ ಎಂದರು.
ಸಚಿವ ಲಾರ್ಡ್ ತಾರೀಖ್ ಅಹ್ಮದ್ ಮಾತನಾಡಿ, ಕೋವಿಡ್ ಸಂಕಷ್ಟದಿಂದ ವಿಶ್ವದ ಆರ್ಥಿಕತೆ ಪುನಶ್ಚೇತನಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವು ಭವಿಷ್ಯದತ್ತ ಗಮನ ಹರಿಸಬೇಕಿದೆ. ಪುನರ್ ನಿರ್ಮಾಣದ ಈ ಅವಕಾಶವನ್ನು ಬಳಸಿಕೊಂಡು ಹಸಿರುಯುಕ್ತ, ಸ್ವಚ್ಛ ಹಾಗೂ ಸುಸ್ಥಿರ ಜಗತ್ತನ್ನು ಕಟ್ಟಬೇಕಿದೆ. ಎರಡೂ ದೇಶಗಳು ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದರಿಂದ ಭಾರತದೊಂದಿಗೆ ನಿಕಟ ಸಂಪರ್ಕ ಹೊಂದುವ ಮೂಲಕ ಸಿಓಪಿ 26ನಲ್ಲಿ ಜಾಗತಿಕ ಕ್ರಮಗಳನ್ನು ಕ್ರೋಡೀಕರಿಸಬೇಕಿದೆ ಎಂದರು.
ಕೇರಳ ಮತ್ತು ಕರ್ನಾಟಕ ರಾಜ್ಯಗಳ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನರ್ ಜೆರೇಮಿ ಪಿಲ್ ಮೋರ್ ಬೆಡ್‍ಫೋರ್ಡ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ತಂದೊಡ್ಡಿರುವ ಸಂಕಷ್ಟದ ಪರಿಸ್ಥಿತಿಯನ್ನು ಸುಧಾರಿಸಲು ಹಸಿರು ತಂತ್ರಜ್ಞಾನದ ಬಳಕೆ ಮಾಡುವುದು ಯು.ಕೆ. ಗುರಿಯಾಗಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಬ್ರಿಟನ್ ಹಾಗೂ ಭಾರತದ ನಾವೀನ್ಯತೆಯುಳ್ಳ ಸ್ಟಾರ್ಟ್ ಆಪ್ ಹಾಗೂ ಕಂಪನಿಗಳ ಸಹಭಾಗಿತ್ವವು ಮುಂದಿನ ಪೀಳಿಗೆಗೆ ಭೂಮಿಯನ್ನು ಸಂರಕ್ಷಸಿಡಲು ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
.jpg)







