ವೀರಪ್ಪನ್ ಕುರಿತ ‘ದಂತಕಥೆಯಾದ ದಂತಚೋರ’ ಕೃತಿ ಬಿಡುಗಡೆ

ಬೆಂಗಳೂರು, ನ.21: ಕಾಡುಗಳ್ಳ ವೀರಪ್ಪನ್‍ನ ಅಟ್ಟಹಾಸ, ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ, ಆತನ ಹತ್ಯೆ ಕುರಿತು ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ್ ಬರೆದಿರುವ ‘ದಂತಕಥೆಯಾದ ದಂತಚೋರ’ ಕೃತಿ ಬಿಡುಗಡೆಯಾಗಿದೆ.
ವೀರಪ್ಪನ ದುಷ್ಕೃತ್ಯಗಳು, ಆತನನ್ನು ಸೆರೆ ಹಿಡಿಯುವ ಕಾರ್ಯಾಚರಣೆ, ವೀರಪ್ಪನ್ ಹತ್ಯೆಗೈದ ಕಾರ್ಯಾಚರಣೆ ಹೀಗೆ ವಿವಿಧ ಚಿತ್ರಣವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಎಲ್ಲ ಚಿತ್ರಣವನ್ನು ಪ್ರತ್ಯಕ್ಷದರ್ಶಿಗಳು, ಕಾರ್ಯಾಚರಣೆ ನಡೆಸಿದ ಪೊಲೀಸರ ಹೇಳಿಕೆ, ಪೊಲೀಸ್ ದಾಖಲೆಗಳ ಮೂಲಕವೇ ಮುಂದಿಡಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಸಚಿವ ಸುರೇಶ್ ಕುಮಾರ್ ತಾವು ಇದುವರೆಗೂ ವೀರಪ್ಪನ್ ಕುರಿತು ಹಲವಾರು ಪುಸ್ತಕಗಳನ್ನು ಓದಿದ್ದರೂ ಗುರುಪ್ರಸಾದ್ ಬರೆದಿರುವ ಪುಸ್ತಕ ವಿಶಿಷ್ಟವಾಗಿದೆ. ಯಾವುದೇ ರಾಗ-ಧ್ವೇಷವಿಲ್ಲದೇ ವೀರಪ್ಪನ್ ವ್ಯಕ್ತಿತ್ವವನ್ನು ಅವನ ಓರೆ-ಕೋರೆಗಳ ಸಹಿತ ನಮ್ಮ ಮುಂದೆ ಪ್ರಸ್ತುತಪಡಿಸಿರುವ ಪುಸ್ತಕವಿದು” ಎಂದು ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಪುಸ್ತಕದ ಪರಿಚಯವನ್ನು ಮಾಡಿರುವ ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ, “ಓದುಗನಿಗೆ ಸಾಹಿತ್ಯಕವಾಗಿ ಸಂತೋಷಕರವಾಗುವ ರೀತಿಯಲ್ಲಿ ಡಾ.ಗುರುಪ್ರಸಾದ್ ಈ ಕೃತಿಯನ್ನು ಬರೆದಿದ್ದಾರೆ. ಒಬ್ಬ ಬರಹಗಾರನಿಗೆ ನಿರುದ್ವಿಗ್ನತೆಯನ್ನು ಸಾಧಿಸುವುದು ಕಷ್ಟ. ಆದರೆ, ಗುರುಪ್ರಸಾದ್ ದೂರದಲ್ಲಿ ನಿಂತು ನೋಡುವ ಒಬ್ಬ ಪೊಲೀಸ್ ಅಧಿಕಾರಿಯಾಗಿ, ಒಬ್ಬ ವೀಕ್ಷಕನಾಗಿ ಈ ನಿರುದ್ವಿಗ್ನತೆಯನ್ನು ತಮ್ಮ ಮಾನವೀಯ ಹೃದಯದಲ್ಲಿ ನೆಲೆಸಿಕೊಂಡು ಈ ಕಥೆಯನ್ನು ಹೇಳಿದ್ದಾರೆ” ಎಂದಿದ್ದಾರೆ. ವೀರಪ್ಪನ್ ಬಗ್ಗೆ ದಶಕಗಳ ಕಾಲ ಪತ್ರಿಕೆಗಳಿಗೆ ವರದಿ ಮಾಡಿರುವ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.
ಲೇಖಕರು ಈ ತಾವು ಒಂದೂವರೆ ವರ್ಷಗಳ ಕಾಲ ಸಂಶೋಧನೆಯನ್ನು ನಡೆಸಿ ವೀರಪ್ಪನ್‍ನ ಒಡನಾಡಿಗಳು, ಕುಟುಂಬ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಮತ್ತು ತಮಿಳುನಾಡಿನ ಹಲವಾರು ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹೀಗೆ 300ಕ್ಕೂ ಹೆಚ್ಚು ಜನರ ಸಂದರ್ಶನವನ್ನು ಮಾಡಿರುವುದಾಗಿ ತಿಳಿಸಿದ್ದಾರೆ. 340 ಪುಟಗಳ ಈ ಪುಸ್ತಕವನ್ನು ಸಪ್ನ ಬುಕ್ ಹೌಸ್ ಪ್ರಕಟಿಸಿದ್ದು ಇದೀಗ ಮಾರಾಟಕ್ಕೆ ಲಭ್ಯವಿದೆ.







