ಕೂಡ್ಲು ಫಾಲ್ಸ್‌ಗೆ ದುಬಾರಿ ಪ್ರವೇಶ ಶುಲ್ಕ ಆದೇಶ ಹಿಂಪಡೆದ ಇಲಾಖೆ!
ಈ ಹಿಂದಿನ 50 ರೂ. ಪ್ರವೇಶ ಶುಲ್ಕ ಮುಂದುವರಿಕೆ
ಹೆಬ್ರಿ, ನ.22: ಸ್ಥಳೀಯರು ಹಾಗೂ ಪ್ರವಾಸಿಗರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಅಭಯಾರಣ್ಯದಲ್ಲಿರುವ ಕೂಡ್ಲು ಫಾಲ್ಸ್‌ನ ದುಬಾರಿ ಪ್ರವೇಶ ಶುಲ್ಕವನ್ನು ಕೈಬಿಟ್ಟಿರುವ ಇಲಾಖೆ, ಈ ಹಿಂದಿನ ಶುಲ್ಕವನ್ನು ಮುಂದುವರಿಸಲು ಆದೇಶ ನೀಡಿದೆ.
ಕೊರೋನ ಲಾಕ್‌ಡೌನ್ ನಂತರ ಕೂಡ್ಲು ಫಾಲ್ಸ್‌ಗೆ ಸಾರ್ವಜನಿಕರ ಪ್ರವೇಶ ಪುನಾರಂಭಗೊಳ್ಳುತ್ತಿದ್ದಂತೆ ಅರಣ್ಯ ಇಲಾಖೆಯ ಚೀಫ್ ವೈಲ್ಡ್‌ಲೈಫ್ ವಾರ್ಡನ್, ಲಾಕ್‌ಡೌನ್‌ಗೆ ಮೊದಲು ಇದ್ದ ಪ್ರವೇಶ ಶುಲ್ಕ 50 ರೂ. ಬದಲು ಮೂರು ಪಟ್ಟು ಅಂದರೆ 200 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದರು. ಅದರಂತೆ ನವೆಂಬರ್ ಮೊದಲ ವಾರದಿಂದ ಭಾರತೀಯರು ಒಬ್ಬರಿಗೆ 200 ರೂ., ಮಕ್ಕಳಿಗೆ ಒಬ್ಬರಿಗೆ 175 ರೂ., ವಿದೇಶಿಗರಿಗೆ ಒಬ್ಬರಿಗೆ 250 ರೂ. ಪ್ರವೇಶ ಶುಲ್ಕವನ್ನು ಪಡೆಯಲಾಗುತ್ತಿತ್ತು.
ಇದಕ್ಕೆ ನಾಡ್ಪಾಲು ಗ್ರಾಮ ಅರಣ್ಯ ಸಮಿತಿ, ಪ್ರವಾಸಿಗರು ಹಾಗೂ ಸಾಮಾ ಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಶುಲ್ಕವನ್ನೇ ಮುಂದುವರೆಸುವಂತೆ ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದರು.
‘ವಿರೋಧದ ಹಿನ್ನೆಲೆಯಲ್ಲಿ ಕೂಡ್ಲು ಫಾಲ್ಸ್‌ಗೆ ಹೆಚ್ಚಿಸಿರುವ ಪ್ರವೇಶ ಶುಲ್ಕವನ್ನು ರದ್ದುಗೊಳಿಸಿ ಚೀಫ್ ವೈಲ್ಡ್‌ಲೈಫ್ ವಾರ್ಡನ್ ಆದೇಶ ಹೊರಡಿಸಿದ್ದಾರೆ. ಅದ ರಂತೆ ನ.21ರಿಂದ ಕೊರೋನ ಲಾಕ್‌ಡೌನ್‌ಗೆ ಮೊದಲು ಇದ್ದ ಒಬ್ಬರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ಪ್ರವೇಶ ಶುಲ್ಕ ಮತ್ತು ಪಾರ್ಕಿಂಗ್‌ಗೆ ಪ್ರತ್ಯೇಕ ಶುಲ್ಕವನ್ನು ಮುಂದುವರಿಸಲಾಗಿದೆ’ ಎಂದು ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.