ಕುಶಾಲಾಕ್ಷಿ ವಿ.ಕುಲಾಲ್‌ಗೆ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ

ಉಡುಪಿ, ನ.22: ಉಡುಪಿ ತುಳುಕೂಟದ ವತಿಯಿಂದ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಅವರಿಗೆ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ರವಿವಾರ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಪ್ರದಾನ ಮಾಡಲಾಯಿತು.
ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಮಾತನಾಡಿ, ತುಳು ಭಾಷೆ ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿ ಗಳ ಪಾತ್ರ ಅತಿ ಮುಖ್ಯವಾಗಿದೆ. ಇಂದು ಎಸೆಸೆಲ್ಸಿಯಲ್ಲಿ ತೃತೀಯ ಭಾಷೆ ತುಳುವನ್ನು ಕಲಿಯುವುದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚು. ಆದುದರಿಂದ ತುಳು ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ಕಡಲ ಮುತ್ತು’ ಕೃತಿಯನ್ನು ಉದ್ಯಮಿ ಯು. ವಿಶ್ವನಾಥ ಶೆಣೈ ಬಿಡುಗಡೆಗೊಳಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕೃತಿ ಪರಿಚಯ ಮಾಡಿದರು. ಹಿರಿಯ ಸಾಹಿತಿ ಅಂಶುಮಾಲಿ ಅವರ ‘ಅಗೋಳಿ ಮಂಜಣ್ಣ’ ನಾಟಕ ಕೃತಿಯನ್ನು ತುಳುಕೂಟ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ 2019-20ನೆ ಸಾಲಿನ 10ನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತೃತೀಯ ಭಾಷೆ ತುಳುವಿನಲ್ಲಿ 100ಕ್ಕೆ 100 ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಮತ್ತು ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಯು.ವಿಶ್ವನಾಥ ಶೆಣೈ ಒಂದು ಲಕ್ಷ ರೂ. ದೇಣಿಗೆಯನ್ನು ತುಳುಕೂಟಕ್ಕೆ ನೀಡಿದರು.
ಅಧ್ಯಕ್ಷತೆಯನ್ನು ತುಳುಕೂಟ ಅಧ್ಯಕ್ಷ ವಿ.ಜಿ.ಶೆಟ್ಟಿ ವಹಿಸಿದ್ದರು. ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಪ್ರಶಸ್ತಿ ಸಮಿತಿಯ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿದರು. ತುಳುಕೂಟ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಉಪನ್ಯಾಸಕ ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು.







