ಅಂಚೆ ಮತ ಅಸಿಂಧುಗೊಳಿಸಲು ಕೋರಿದ ಟ್ರಂಪ್ ತಂಡದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ವಾಶಿಂಗ್ಟನ್,ನ.22: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸೋಲಿನ ಬಳಿಕವೂ ಅಧಿಕಾರ ಉಳಿಸಿಕೊಳ್ಳುವ ಹರಸಾಹಸವನ್ನು ಮುಂದುವರಿಸಿರುವ ಟ್ರಂಪ್ ಅವರಿಗೆ ಶನಿವಾರ ಮತ್ತೆ ಮುಖಭಂಗವಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಚಲಾವಣೆಯಾದ ಲಕ್ಷಾಂತರ ಅಂಚೆಮತಗಳನ್ನು ಅಸಿಂಧುಗೊಳಿಸಬೇಕೆಂಬ ಟ್ರಂಪ್ ಪ್ರಚಾರತಂಡದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ತಳ್ಳಿಹಾಕಿದೆ.
ಅಂಚೆಮತಗಳಲ್ಲಿ ಅಕ್ರಮಗಳು ನಡೆದಿವೆಯೆಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲವೆಂದು ಪೆನ್ಸಿಲ್ವೇನಿಯಾ ನ್ಯಾಯಾಲಯದ ನ್ಯಾಯವಾದಿ ಮ್ಯಾಥ್ಯೂ ಬ್ರಾನ್, ಅರ್ಜಿಯನ್ನು ತಿರಸ್ಕರಿಸುತ್ತಾ ಹೇಳಿದ್ದಾರೆ.
ಸುಮಾರು 70 ಲಕ್ಷ ಮತದಾರರ ಮತಗಳನ್ನು ಅಸಿಂಧುಗೊಳಿಸಲು ಟ್ರಂಪ್ ಪಾಳಯ ಯತ್ನಿಸಿತ್ತು ಎಂದು ನ್ಯಾಯಾಧೀಶ ಬ್ರಾನ್ ತೀರ್ಪಿನಲ್ಲಿ ತಿಳಿಸಿದ್ದಾರೆ.
‘‘ದೇಶದ ಆರನೇ ಅತ್ಯಧಿಕ ಜನಸಂಖ್ಯೆಯ ರಾಜ್ಯವಾದ ಪೆನ್ಸಿಲ್ವೇನಿಯಾದ 70 ಲಕ್ಷ ಮತದಾರರನ್ನು ಬಿಡಿ, ಒಬ್ಬನೇ ಒಬ್ಬ ಮತದಾರನ ಮತವನ್ನು ಅಸಿಂಧುಗೊಳಿಸುವುದನ್ನು ಅಮೆರಿಕವು ಸಮರ್ಥಿಸುವುದಿಲ್ಲ’’ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ನ್ಯಾಯಾಲಯದ ಈ ಆದೇಶದಿಂದಾಗಿ ಪೆನ್ಸಿಲ್ವೇನಿಯಾದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಅವರು ಡೊನಾಲ್ಡ್ ಟ್ರಂಪ್‌ರನ್ನು 80 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿರುವುದನ್ನು ಮುಂದಿನ ವಾರ ಅಧಿಕೃತವಾಗಿ ಪ್ರಮಾಣೀಕರಿಸಲು ಸಾಧ್ಯವಾಗಿದೆ.
ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ತನಗಾಗಿರುವ ಸೋಲನ್ನು ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ್ದಾರೆ. ಎದುರಾಳಿ ಬೈಡನ್ , ಮತವಂಚನೆಯ ಮೂಲಕ ಗೆದ್ದಿದ್ದಾರೆಂದು ಅವರು ಆರೋಪಿಸುತ್ತಾ ಬಂದಿದ್ದಾರೆ. ಆದರೆ ಅದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸಲು ಅವರು ವಿಫಲರಾಗಿದ್ದಾರೆ.







