ಕುಂದಾಪುರ ಎಂಕೋಡಿ ಬೀಚ್‌ನಲ್ಲಿ ಮುಳುಗಿ ಓರ್ವ ಮೃತ್ಯು, ಇನ್ನೊಬ್ಬನ ರಕ್ಷಣೆ

ಕುಂದಾಪುರ, ನ.23: ಇಲ್ಲಿನ ಎಂಕೋಡಿ ಎಂಬಲ್ಲಿ ಸಮುದ್ರದಲ್ಲಿ ಈಜುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ 1:30ರ ಸುಮಾರಿಗೆ ನಡೆದಿದೆ.
ಪ್ರಾಥಮಿಕ ಮಾಹಿತಿಯಂತೆ ಮೃತರನ್ನು ನಳಗುಂದ ತಾಲೂಕಿನ ಮಂಜು (38) ಎಂದು ಗುರುತಿಸಲಾಗಿದೆ. ಪತ್ನಿ ಜೊತೆ ಮಂಜು ಬೀಚ್‌ಗೆ ತೆರಳಿದ್ದು, ಈ ವೇಳೆ ಮಂಜು ಹಾಗೂ ಇನ್ನೋರ್ವ ವ್ಯಕ್ತಿ ಸಮುದ್ರಕ್ಕೆ ಈಜಲು ಆರಂಭಿಸಿದ್ದರೆನ್ನಲಾಗಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿ ಮಂಜು ನೀರಿನಲ್ಲಿ ಮುಳುಗಿದನೆನ್ನಲಾಗಿದೆ. ಜೊತೆಗಿದ್ದ ವ್ಯಕ್ತಿ ಮಂಜುವನ್ನು ರಕ್ಷಣೆ ಯತ್ನಿಸಿದ್ದು, ಆತ ಕೂಡ ಮುಳುಗಿದನೆನ್ನಲಾಗಿದೆ.
ಕೂಡಲೇ ಸ್ಥಳೀಯರಾದ ಹಸೈನಾರ್, ಝೈನ್, ನಾಗರಾಜ್ ಕೋಡಿ, ವೆಂಕಟೇಶ್ ಕೋಡಿ, ಸಲಾಂ ಎಂಬವರು ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತಂದರು. ಆದರೆ ಅಷ್ಟರಲ್ಲಿ ಮಂಜು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ. ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಇವರು ಕುಂದಾಪುರ ಗಾಂಧಿ ಮೈದಾನದಲ್ಲಿ ವಾಸ ಮಾಡಿಕೊಂಡಿದ್ದರೆನ್ನಲಾಗಿದೆ.
‘ಎಂಕೋಡಿ ಬೀಚ್‌ನಲ್ಲಿ ಹಲವು ಮಂದಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆದರೆ ಇಲ್ಲಿ ಸುರಕ್ಷತೆಗೆ ಸಂಬಂಧಿಸಿ ಯಾವುದೇ ಸರಿಯಾದ ವ್ಯವಸ್ಥೆಗಳಿಲ್ಲ. ಸರಕಾರ ಇದರತ್ತ ಗಮನ ಹರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.








