ಮಾಸಾಂತ್ಯಕ್ಕೆ ಡಿಕೆಶಿ ಉಡುಪಿಗೆ ಭೇಟಿ: ಅಶೋಕ್ ಕುಮಾರ್

ಉಡುಪಿ, ನ.23: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನವೆಂಬರ್ ತಿಂಗಳ ಕೊನೆಯ ವೇಳೆಗೆ ಉಡುಪಿ ಹಾಗೂ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ತಿಳಿಸಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು. ಡಿಕೆಶಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಕಾರ್ಯಕ್ರಮ ರೂಪಿಸಲು ಅಗತ್ಯವಿರುವ ಸಲಹೆ ಗಳನ್ನು ನೀಡುವಂತೆ ಅವರು ಕೋರಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜಿಲ್ಲಾ ಸಮಿತಿ ಹಮ್ಮಿಕೊಂಡ ಸಹಿ ಸಂಗ್ರಹ ಪ್ರತಿಯ ಪ್ರದರ್ಶನವನ್ನು ಯಶಸ್ವಿಗೊಳಿಸಲು ಸಹಕರಿಸಿದ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕೊರೋನ ಸಂಕಷ್ಟದ ಸಮಯದಲ್ಲೂ ಬಿಜೆಪಿ ನೇತೃತ್ವದ ಸರಕಾರಗಳು ರೈತರಿಗೆ ಮಾರಕವಾಗುವ ಮಸೂದೆಗಳನ್ನು ತಿದ್ದುಪಡಿ ಮೂಲಕ ತಂದು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಇಂದು ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ದಿನೇಶ್ ಪುತ್ರನ್, ನೀರೆ ಕೃಷ್ಣ ಶೆಟ್ಟಿ, ಬಿ.ನರಸಿಂಹ ಮೂರ್ತಿ, ನವೀನ್‌ಚಂದ್ರ ಶೆಟ್ಟಿ, ಭಾಸ್ಕರ ಶೆಟ್ಟಿ ಕಿದಿ ಯೂರು, ಕುಶಲ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ಶಬ್ಬೀರ್ ಅಹ್ಮದ್, ರೋಶನ್ ಒಲಿವರ್, ಲೂಯಿಸ್ ಲೋಬೊ, ಪ್ರಶಾಂತ್ ಜತ್ತನ್ನ, ಶಶಿಧರ ಶೆಟ್ಟಿ ಎಲ್ಲೂರು, ಉದ್ಯಾವರ ನಾಗೇಶ ಕುಮಾರ್, ಜನಾರ್ದನ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.







