ಯಕ್ಷಾಂಗಣ ಗೌರವ ಪ್ರಶಸ್ತಿಗೆ ಕಲಾವಿದ ದಾಸಪ್ಪರೈ ಆಯ್ಕೆ

ಮಂಗಳೂರು, ನ.23: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ವತಿಯಿಂದ ಹಿರಿಯ ಕಲಾವಿದರಿಗೆ ನೀಡಲಾಗುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಗೆ 2019-20ನೇ ಸಾಲಿನಲ್ಲಿ ಕನ್ನಡ-ತುಳು ಪ್ರಸಂಗಗಳ ಪ್ರಸಿದ್ದ ವೇಷಧಾರಿ, ಮೇಳದ ಸಂಚಾಲಕ ಕೆ.ಎಚ್. ದಾಸಪ್ಪರೈ ಆಯ್ಕೆಯಾಗಿದ್ದಾರೆ.
ಯಕ್ಷಾಂಗಣ ಮಂಗಳೂರು ಹಾಗೂ ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಯಕ್ಷ ಪ್ರತಿಷ್ಠಾನಗಳನ್ನು ಒಳಗೊಂಡ ಜಂಟಿ ಸಮಿತಿಯು ದಾಸಪ್ಪರೈಯವರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.
ಕುತ್ಯಾಳ ಹೊಸಮನೆ ದಿ.ಬೈಂಕಿ ರೈ ಮತ್ತು ಕುಂಞಕ್ಕೆ ದಂಪತಿಯ ಪುತ್ರರಾದ ಕೆ.ಎಚ್.ದಾಸಪ್ಪರೈ ತನ್ನ 15ನೇ ವಯಸ್ಸಿನಲ್ಲಿ ಕರ್ನಾಟಕ ಯಕ್ಷಗಾನ ಸಭಾದ ಮೂಲಕ ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. ಕರ್ನಾಟಕ, ಕದ್ರಿ, ಕುಂಬಳೆ, ಮಂಗಳಾದೇವಿ, ಸರಪಾಡಿ, ಬಾಚಕೆರೆ ಮೇಳಗಳಲ್ಲಿ ನಾಲ್ಕೂವರೆ ದಶಕಗಳ ತಿರುಗಾಟ ಮಾಡಿರುವ ಅವರು ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಸಾದಿತ ಯಕ್ಷಗಾನ ಮಂಡಳಿ ಕುಂಬಳೆ ಮೇಳವನ್ನು ಕಟ್ಟಿ ಆರು ವರ್ಷ ನಡೆಸಿದರು.
ಮುಂಬೈ,ಚೆನ್ನೈ ದೆಹಲಿ, ಬಹರೈನ್, ಕತರ್, ದುಬೈ, ಮಸ್ಕತ್ ಹೀಗೆ ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ನೂರಾರು ಸನ್ಮಾನಗಳನ್ನು ಪಡೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಳಿಕೆ -ಬೋಳಾರ ಪ್ರತಿಷ್ಠಾನ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಅವರು ತುಳುನಾಡ ತುಳುಶ್ರೀ, ಯಕ್ಷರಂಗ ನಟನಾ ಚತುರ, ಯಕ್ಷ ಭಾರ್ಗವ, ರಂಗಸ್ಥಳದ ಗುರಿಕಾರ ಬಿರುದುಗಳಿಂದ ಸನ್ಮಾನಿತರಾಗಿದ್ದಾರೆ.
ನ.29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ’ಪಾರಿಜಾತ’ ಸಭಾಗೃಹದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಆಯೋಜಿಸಿರುವ 8ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ’ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.







