ಡೋಕ್ಲಮ್ ಬಳಿ ಚೀನಾದಿಂದ ಯುದ್ಧ ಸಾಮಗ್ರಿ ಬಂಕರ್ ನಿರ್ಮಾಣ

ಹೊಸದಿಲ್ಲಿ, ನ.23: ಭಾರತ-ಚೀನಾ ಸೇನೆಗಳ ನಡುವಿನ ಬಿಕ್ಕಟ್ಟಿನ ಕೇಂದ್ರವಾಗಿದ್ದ ಡೋಕ್ಲಮ್‌ನ ಸಿಂಚೆಲ ಕಣಿವೆಯ 7 ಕಿ.ಮೀ. ದೂರದಲ್ಲಿ , ಭೂತಾನ್ ಮತ್ತು ಚೀನಾ ಗಡಿಭಾಗದ ಸಮೀಪ ಚೀನಾವು ಮಿಲಿಟರಿ ದರ್ಜೆಯ ಯುದ್ಧಸಾಮಾಗ್ರಿ ಶೇಖರಣಾ ಬಂಕರ್‌ಗಳನ್ನು ನಿರ್ಮಿಸಿರುವುದು ಉಪಗೃಹದ ಚಿತ್ರಗಳಿಂದ ತಿಳಿದು ಬಂದಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ಇಲ್ಲಿರುವ ಸೇನಾ ನೆಲೆಗಳಲ್ಲಿರುವ ಸೇನೆಗಳ ಬಲವರ್ಧಿಸುವ ಮೂಲಕ , ಒಂದು ವೇಳೆ ಯುದ್ಧದ ಸಂದರ್ಭ ಬಂದರೆ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಸೈನಿಕರನ್ನು ಸಜ್ಜುಗೊಳಿಸುವ ಪ್ರಮುಖ ಉದ್ದೇಶ ಇದರ ಹಿಂದಿರುವ ಸಾಧ್ಯತೆಯಿದೆ ಎಂದು ಉಪಗ್ರಹ ಚಿತ್ರಣ ತಜ್ಞ ಹಾಗೂ ಮಿಲಿಟರಿ ವಿಶ್ಲೇಷಕ ಸಿಮ್ ಟ್ಯಾಕ್ ಅಭಿಪ್ರಾಯಪಟ್ಟಿದ್ದಾರೆ.
ಭೂತಾನ್‌ನ ಗಡಿ ಭಾಗದಲ್ಲಿ ಚೀನಾದ ಗ್ರಾಮವನ್ನು ಪತ್ತೆಹಚ್ಚಿದ ಬಳಿಕ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಡೋಕ್ಲಮ್ ಪ್ರದೇಶದಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕ ಮೂಡಿದೆ ಎಂದವರು ಹೇಳಿದ್ದಾರೆ. 2019ರ ಡಿಸೆಂಬರ್‌ನಲ್ಲಿ ಉಪಗ್ರಹ ರವಾನಿಸಿದ ಚಿತ್ರದಲ್ಲಿ ಬಂಕರ್‌ನ ಕುರುಹೇ ಇರಲಿಲ್ಲ. ಆದರೆ 2020ರ ಅಕ್ಟೋಬರ್ 28ರಂದು ಲಭಿಸಿದ ಚಿತ್ರದಲ್ಲಿ ಬಂಕರ್ ಬಹುತೇಕ ಸಜ್ಜುಗೊಂಡ ಸ್ಥಿತಿಯಲ್ಲಿದೆ. ಅಂದರೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಈ ಸುಸಜ್ಜಿತ ಬಂಕರ್ ನಿರ್ಮಿಸಲಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಉಭಯ ಸೇನೆಗಳ ಮಧ್ಯೆ ಡೋಕ್ಲಮ್ ಬಿಕ್ಕಟ್ಟು ಆರಂಭವಾದ ಸಂದರ್ಭದಲ್ಲೂ ಬಂಕರ್ ನಿರ್ಮಾಣ ಕಾರ್ಯ ಸದ್ದಿಲ್ಲದೆ ಮುಂದುವರಿದಿತ್ತು ಎಂದು ಸಿಮ್ ಟ್ಯಾಕ್ ಹೇಳಿದ್ದಾರೆ.
ಬಂಕರ್ ನಿರ್ಮಿಸಿದ ಸ್ಥಳದಿಂದ ಸಿಂಚೆಲಾ ಕಣಿವೆಗೆ ಕಚ್ಚಾ ರಸ್ತೆಯಿದೆ. ಇಲ್ಲಿಂದ ಚೀನಾ ನಿರ್ಮಿಸಿದ ಸರ್ವಋತು ರಸ್ತೆಯ ಮೂಲಕ ಡೋಕ್ಲಮ್ ಪ್ರಸ್ಥಭೂಮಿಯನ್ನು ಸಂಪರ್ಕಿಸಬಹುದು. ಭೂತಾನ್ ತನ್ನ ಪ್ರದೇಶವೆಂದು ಹೇಳಿಕೊಂಡಿರುವ ಪ್ರದೇಶದಲ್ಲಿ ಚೀನಾ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ದೃಢ ನಿರ್ಧಾರ ಮಾಡಿರುವುದು ಇದರಿಂದ ತಿಳಿಯುತ್ತದೆ ಎಂದವರು ಹೇಳಿದ್ದಾರೆ.







