ದೇವನಹಳ್ಳಿ ಅತ್ಯಾಚಾರ ಪ್ರಕರಣ: ನ್ಯಾಶನಲ್ ವಿಮೆನ್ಸ್ ಫ್ರಂಟ್ ಖಂಡನೆ
ಬೆಂಗಳೂರು, ನ.26 : ಬೆಂಗಳೂರಿನ ದೇವನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ದೇವಸ್ಥಾನವೊಂದರ ಅರ್ಚಕ ಅತ್ಯಾಚಾರ ಎಸಗಿರುವ ಘಟನೆಯನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಖಂಡಿಸಿದೆ.
ದೇವಸ್ಥಾನದ ಅಂಗಳದಲ್ಲಿ ಆಟವಾಡುತ್ತಿದ್ದ ಎಂಟು ವರ್ಷ ಪ್ರಾಯದ ಬಾಲಕಿಯನ್ನು ಅರ್ಚಕ ಅತ್ಯಾಚಾರ ಎಸಗಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆ ಕಥುವಾದ ಆಸಿಫಾ ಪ್ರಕರಣ ನೆನಪಿಸುತ್ತದ್ದು, ಇದಕ್ಕೆ ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಸರಕಾರವೇ ಹೊಣೆಯಾಗಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ತಬಸ್ಸುಮ್ ಅರಾ ಹೇಳಿದ್ದಾರೆ.
ಉತ್ತರ ಪ್ರದೇಶದ ಹತ್ರಸ್, ಬಹ್ರಾನ್ ಪುರ್, ಬಿಹಾರದಲ್ಲಿ ನಡೆದಂತಹ ಅತ್ಯಾಚಾರ ಪ್ರಕರಣಗಳು ಕರ್ನಾಟಕದಲ್ಲಿಯೂ ನಡೆಯುತ್ತಿರುವುದು ದುರದೃಷ್ಟಕರ. ಕೋವಿಡ್ ಸಮಯದಲ್ಲಿ ಸುಗ್ರೀವಾಜ್ಞೆ ಮೂಲಕ ಹಲವು ಜನವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಕೇಂದ್ರ ಸರಕಾರ, ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ತರವಲ್ಲಿ ವಿಫಲವಾಗಿರುವುದು ಆತಂಕಕಾರಿಯಾಗಿದೆ ಎಂದು ತಬಸ್ಸುಮ್ ಅರಾ ತಿಳಿಸಿದ್ದಾರೆ.
ದೇವನಹಳ್ಳಿ ಪ್ರಕರಣವನ್ನು ಸರಕಾರ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ನ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.