ಆರೋಗ್ಯಪೂರ್ಣ ಮನಸ್ಸುಗಳನ್ನು ಕಟ್ಟಲು ಭಾಷೆ ಮುಖ್ಯ: ಡಾ.ಜ್ಯೋತಿ ಚೇಳಾರು

ಶಿರ್ವ, ನ.27: ಭಾಷೆಯನ್ನು ಜಾತಿ, ಮತ, ಧರ್ಮಗಳ ಮೇಲೆ ಗುರುತಿ ಸಲು ಆಗುವುದಿಲ್ಲ. ಆರೋಗ್ಯಪೂರ್ಣ ಮನಸ್ಸುಗಳನ್ನು ಕಟ್ಟಲು ಭಾಷೆ ಮುಖ್ಯ. ಬದುಕು ಮತ್ತು ಬಿಡುಗಡೆಯ ಎಲ್ಲಾ ಆಯಾಮಗಳಲ್ಲೂ ಭಾಷೆ ವಿಶೇಷ ಪ್ರಭಾವ ಬೀರಿದೆ ಎಂದು ಹಿರಿಯ ಸಾಹಿತಿ, ಎರ್ಮಾಳು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳಾರು ಹೇಳಿದ್ದಾರೆ.
ಶಿರ್ವ ಸಂತಮೇರಿ ಪದವಿ ಕಾಲೇಜಿನ ಕನ್ನಡ ವಿಬಾಗದ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ಕನ್ನಡ ಮನಸ್ಸು -2020 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ವಚನಕಾರರು, ಕೀರ್ತನಕಾರರು ಕನ್ನಡ ಸಾಹಿತ್ಯದ ಜೊತೆಗೆ ಜೀವನ ವೌಲ್ಯಗಳನ್ನು ಸರಳ ಮಾತುಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿದ ರೀತಿ ಅದ್ಭುತವಾಗಿದ್ದು, ಅವು ಕನ್ನಡ ಭಾಷೆಗೆ ದ್ರ ತಳಹದಿಯನ್ನೇ ಹಾಕಿವೆ. ಕನ್ನಡ ಸಾಹಿತ್ಯದ ಸಮೃದ್ಧಿ ಹಾಗೂ ಉಳಿಯುವಿಕೆಗೆ ನೀಡಿದ ಕೊಡುಗೆ ಅನನ್ಯ. ಸ್ವಾತಂತ್ರ್ಯ ಚಳುವಳಿ, ಏಕೀಕರಣ ಚಳುವಳಿಯಲ್ಲೂ ಸಾಹಿತ್ಯದ ಪ್ರೇರಣಾಶಕ್ತಿ ವಿಶೇಷ ಕೊಡುಗೆಯನ್ನು ನೀಡಿದೆ. ಕನ್ನಡ ಮನಸ್ಸುಗಳು ಸರ್ವಜನಾಂಗವನ್ನು ವೈಶಿಷ್ಟ್ಯಪೂರ್ಣವಾಗಿ ಒಗ್ಗೂಡಿಸಿವೆ ಎಂದರು.
ಕಾರ್ಯಕ್ರಮವನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉದ್ಘಾಟಿಸಿದರು. ಈ ಸಂದರ್ದಲ್ಲಿ ಶಿರ್ವದ ಹಿರಿಯ ಕನ್ನಡದ ಕಟ್ಟಾಳು ಶಿವಾನಂದ ಕಾಮತ್‌ರವರಿಗೆ ಕಾಲೇಜಿನ ವತಿಯಿಂದ ರಾಜ್ಯೋತ್ಸವದ ಗೌರವ ನೀಡಿ ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಹೆರಾಲ್ಡ್ ಐವನ್ ಮೋನಿಸ್ ವಹಿಸಿದ್ದರು.
ಕಾರ್ಯಕ್ರಮ ಸಂಯೋಜಕಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಯಶೋದಾ ಎಲ್ಲೂರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ದಿವ್ಯಶ್ರೀ ವಂದಿಸಿದರು. ಸಹಪ್ರಾಧ್ಯಾಪಕಿ ಡಾ.ಗುಲಾಬಿ ಕಾರ್ಯಕ್ರಮ ನಿರೂಪಿಸಿದರು.







