ಹೆಲ್ಮೆಟ್ ಖರೀದಿಸುವಾಗ ಈ ವಿಚಾರ ತಿಳಿದಿರಲಿ
ಕೇಂದ್ರ ಸರಕಾರ ಕಟ್ಟುನಿಟ್ಟಾಗಿ ಹೇಳಿದ್ದೇನು?
ಹೊಸದಿಲ್ಲಿ: ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಗಳನ್ನು ಮಾತ್ರ ಭಾರತದಲ್ಲಿ ತಯಾರಿಸಿ ಮಾರಾಟ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಈ ಕ್ರಮದಿಂದಾಗಿ ದೇಶದಲ್ಲಿ ಕಡಿಮೆ ಗುಣಮಟ್ಟದ ಹೆಲ್ಮೆಟ್ ಗಳ ತಯಾರಿ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಬಹುದಲ್ಲದೆ ಅಪಘಾತಗಳ ವೇಳೆ ಬೈಕ್ ಸವಾರರು ಗಂಭೀರವಾಗಿ ಗಾಯಗೊಳ್ಳುವುದನ್ನೂ ತಡೆಯಬಹುದಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
ಸುಪ್ರೀಂ ಕೋರ್ಟ್ನ ರಸ್ತೆ ಸುರಕ್ಷತಾ ಸಮಿತಿಯ ಸೂಚನೆಯಂತೆ ಭಾರತದ ಹವಾಮಾನಕ್ಕೆ ತಕ್ಕಂತಹ ಲಘು ಹೆಲ್ಮೆಟ್ ಗಳನ್ನು ಬಳಸುವ ನಿಟ್ಟಿನಲ್ಲಿ ಪರಿಗಣಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯು ತನ್ನ ವರದಿಯಲ್ಲಿ ದೇಶದಲ್ಲಿ ಬಳಕೆಗೆ ಲಘು ಹೆಲ್ಮೆಟ್ ಯೋಗ್ಯ ಎಂದು ಹೇಳಿದ ನಂತರದ ಬೆಳವಣಿಗೆಯಲ್ಲಿ ಬ್ಯುರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್ ಹೆಲ್ಮೆಟ್ ತಯಾರಿಗೆ ಅಗತ್ಯವಿರುವ ಕೆಲವೊಂದು ಮಾರ್ಗಸೂಚಿಗಳನ್ನು ಅದಕ್ಕೆ ತಕ್ಕಂತೆ ಬದಲಾಯಿಸಿದೆ.
2021ರ ಜೂನ್ 1ರ ನಂತರ ಬಿಐಎಸ್ ಅಲ್ಲದ ದ್ವಿಚಕ್ರ ವಾಹನ ಹೆಲ್ಮೆಟ್ ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಅವಕಾಶವಿಲ್ಲ. ನಿಯಮ ಉಲ್ಲಂಘನೆಗೆ ದಂಡ ವಿಧಿಸಬಹುದಾಗಿದೆ. ದೇಶದಲ್ಲಿ ವಾರ್ಷಿಕ ಸುಮಾರು 1.7 ಕೋಟಿ ಹೆಲ್ಮೆಟ್ಗಳನ್ನು ತಯಾರಿಸಲಾಗುತ್ತದೆ.