ಜಿಲ್ಲಾಸ್ಪತ್ರೆಯಲ್ಲಿ 4 ಶಿಶುಗಳ ಮರಣ: ತುರ್ತು ಸಭೆ ನಡೆಸಿದ ಮಧ್ಯಪ್ರದೇಶ ಮುಖ್ಯಮಂತ್ರಿ

ಭೋಪಾಲ್, ನ.30: ಶಹದೋಲ್ ಜಿಲ್ಲಾಸ್ಪತ್ರೆಯಲ್ಲಿ ರವಿವಾರ 4 ನವಜಾತ ಶಿಶುಗಳು ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ರವಿವಾರ ಜಿಲ್ಲಾಸ್ಪತ್ರೆಯಲ್ಲಿ 4 ಶಿಶುಗಳು ಜನಿಸಿದ 12 ಗಂಟೆಯೊಳಗೆ ಮೃತಪಟ್ಟಿದ್ದವು. ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಶಿಶುಗಳು ಸಾವನ್ನಪ್ಪಿವೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ತನ್ನ ಪತ್ನಿಗೆ ಉಮಾರಿಯಾ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ನವಜಾತ ಶಿಶುವಿನ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಕಾರಣ ಶಹದೋಲ್ ಜಿಲ್ಲಾಸ್ಪತ್ರೆಗೆ ಸೇರಿಸುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಆದರೆ ಶಹದೋಲ್ ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಲ್ಲಿನ ಸಿಬ್ಬಂದಿಗಳು ಹಾಗೂ ವೈದ್ಯರು ಸಕಾಲದಲ್ಲಿ ವೈದ್ಯಕೀಯ ನೆರವು ಒದಗಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಮಗು ಸಾವನ್ನಪ್ಪಿದೆ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿ ಆರೋಪಿಸಿದ್ದಾನೆ. ಆಸ್ಪತ್ರೆಯಲ್ಲಿ 12 ಗಂಟೆಯ ಅವಧಿಯಲ್ಲಿ 4 ನವಜಾತ ಶಿಶುಗಳು ಸಾವನ್ನಪ್ಪಿದ್ದು ಆಸ್ಪತ್ರೆಯವರ ಬೇಜವಾಬ್ದಾರಿಯ ವರ್ತನೆಗೆ ಇದು ಉತ್ತಮ ಉದಾಹರಣೆ ಎಂದಾತ ಆರೋಪಿಸಿದ್ದಾನೆ.
ಆದರೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಪಾಂಡೆ ಆರೋಪವನ್ನು ನಿರಾಕರಿಸಿದ್ದು, ಆಸ್ಪತ್ರೆಗೆ ದಾಖಲಿಸುವಾಗಲೇ ಮಗುವಿನ ಆರೋಗ್ಯ ಹದಗೆಟ್ಟಿತ್ತು. ಆದರೂ ವೈದ್ಯರು ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಆಸ್ಪತ್ರೆಯವರ ಅಸಡ್ಡೆಯ ಕುರಿತು ಆರೋಪ ಕೇಳಿಬಂದರೆ, ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಜನವರಿಯಲ್ಲಿ ಇದೇ ಆಸ್ಪತ್ರೆಯಲ್ಲಿ ಆದಿವಾಸಿ ಸಮುದಾಯದ 6 ಶಿಶುಗಳು 24 ಗಂಟೆಯೊಳಗೆ ಮೃತಪಟ್ಟಿದ್ದವು.







