ಉಳ್ಳಾಲ ಮೀನುಗಾರಿಕಾ ಬೋಟು ದುರಂತ : ಇಬ್ಬರು ಮೀನುಗಾರರ ಮೃತದೇಹ ಪತ್ತೆ, ನಾಲ್ವರು ನಾಪತ್ತೆ
10 ಬೋಟ್, ಮುಳುಗು ತಜ್ಞರು, ಕೋಸ್ಟ್‌ಗಾರ್ಡ್‌ನಿಂದ ಕಾರ್ಯಾಚರಣೆ

ಮಂಗಳೂರು, ಡಿ.1: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟ್‌ವೊಂದು ಕಡಲಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿ ದುರಂತ ಸಂಭವಿಸಿದೆ. ನಾಪತ್ತೆಯಾದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಬೊಕ್ಕಪಟ್ಣ ನಿವಾಸಿಗಳಾದ ಪಾಂಡುರಂಗ ಸುವರ್ಣ (58), ಪ್ರೀತಂ (25) ಎಂಬವರ ಮೃತದೇಹ ಪತ್ತೆಯಾಗಿದೆ. ಕಸಬ ಬೆಂಗ್ರೆ ನಿವಾಸಿಗಳಾದ ಚಿಂತನ್ (21) ಮುಹಮ್ಮದ್ ಹಸೈನಾರ್ (28), ಮುಹಮ್ಮದ್ ಅನ್ಸಾರ್ (32), ಝಿಯಾವುಲ್ಲಾ (36) ನಾಪತ್ತೆಯಾದ ಮೀನುಗಾರರು.
ಘಟನೆ ವಿವರ
ಉಳ್ಳಾಲದ ಪಶ್ಚಿಮ ಭಾಗದ ಬೆಂಗರೆ ಪ್ರದೇಶದ ನೇರಕ್ಕೆ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ಈ ದಾರುಣ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಹೊಸಬೆಟ್ಟು ಮೂಲದ ಪ್ರಸ್ತುತ ಬೋಳಾರದ ಪ್ರಶಾಂತ್ ಎಂಬವರ ಮಾಲಕತ್ವದ ‘ಶ್ರೀರಕ್ಷಾ’ ಹೆಸರಿನ ಪರ್ಸಿನ್ ಬೋಟು ಸೋಮವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿ ಸುಮಾರು 25 ಮಂದಿ ಮೀನುಗಾರರು ಇದ್ದರು.
ಆಳ ಸಮುದ್ರಕ್ಕೆ ತೆರಳಿದ ಬೋಟು ಎಂದಿನಂತೆಯೇ ಮೀನು ಬೇಟೆಗೆ ಮುಂದಾಗಿದೆ. ಬೆಳಗ್ಗಿನಿಂದ ಸಂಜೆವರೆಗೆ ಮೀನುಗಾರಿಕೆ ನಡೆಸಿದ್ದಾರೆ. ಈ ನಡುವೆ ಸಂಗ್ರಹಗೊಂಡ ಎಲ್ಲ ಮೀನನ್ನು ಬೋಟಿನಲ್ಲಿ ತುಂಬಿಕೊಂಡಿದ್ದಾರೆ. ಬಳಿಕ ಬೋಟು ಮಂಗಳೂರಿನ ದಕ್ಕೆಯತ್ತ ವಾಪಸಾಗಲು ಅನುವಾಗಿದೆ. ಮಂಗಳವಾರ ನಸುಕಿನ 4 ಗಂಟೆ ಸುಮಾರಿಗೆ ಬೋಟು ಕಲ್ಲಿಗೆ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಢಿಕ್ಕಿಯಾದ ಪರಿಣಾಮ ಬೋಟು ಸಮುದ್ರದಲ್ಲಿ ಮುಳುಗಡೆಯಾಗಿದೆ. ಪರ್ಸಿನ್ ಬೃಹತ್ ಬೋಟು ಸ್ಟೀಲ್‌ನಿಂದ ಕೂಡಿದ್ದರಿಂದ ಸುಲಭವಾಗಿಯೇ ಕಡಲಲ್ಲಿ ಪಲ್ಟಿಯಾಗಿದೆ. ಕಲ್ಲಿಗೆ ಢಿಕ್ಕಿ ಹೊಡೆದ ರಭಸದಲ್ಲಿ ಬೋಟು ಬಹುತೇಕ ಜಖಂಗೊಂಡು, ಭಾಗಶಃ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ.
ಬೋಟು ಸಮುದ್ರಕ್ಕೆ ಮಗುಚಿ ಬೀಳುತ್ತಿದ್ದಂತೆ ಬೋಟಿನಲ್ಲಿದ್ದ ಸುಮಾರು 25 ಮೀನುಗಾರರ ಪೈಕಿ 19 ಮಂದಿ ಡಿಂಗಿ (ಬೃಹತ್ ಬೋಟುಗಳಲ್ಲಿ ಅವಘಡ ಸಂಭವಿಸಿದಾಗ ಆಪತ್ಕಾಲದಲ್ಲಿ ಬಳಸುವ ಸಣ್ಣ ಬೋಟು) ಸಹಾಯದಿಂದ ದಡ ಸೇರಿಕೊಂಡಿದ್ದಾರೆ. ಇನ್ನುಳಿದ ಆರು ಮೀನುಗಾರರು ಸಮುದ್ರದಲ್ಲೇ ನಾಪತ್ತೆಯಾಗಿದ್ದರು.
ಸಂಪರ್ಕಕ್ಕೆ ಸಿಗದ ವೈರ್‌ಲೆಸ್: ಸೋಮವಾರ ತಡರಾತ್ರಿ ಮೀನುಗಾರಿಕಾ ಬಂದರ್‌ಗೆ ಮೀನು ಹೊತ್ತ ಬೋಟು ಆಗಮಿಸ ಬೇಕಿತ್ತು. ಆದರೆ ಮಂಗಳವಾರ ಬೆಳಗ್ಗಿನವರೆಗೆ ಬೋಟ್ ದಕ್ಕೆಗೆ ವಾಪಸಾಗದ ಹಿನ್ನೆಲೆಯಲ್ಲಿ ಬೋಟ್ ನೋಡಿಕೊಳ್ಳುವ ‘ರೈಟರ್’ ಮೀನುಗಾರರಿಗೆ ಕರೆ ಮಾಡಿದ್ದಾರೆ.
ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಕ್ಷಣವೇ ಬೋಟ್‌ನ ವೈರ್‌ಲೆಸ್‌ಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ಇತರ ಮೀನುಗಾರಿಕಾ ಪರ್ಸಿನ್ ಬೋಟ್‌ನವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ 10ಕ್ಕೂ ಹೆಚ್ಚು ಪರ್ಸಿನ್ ಬೋಟುಗಳು, ಕರಾವಳಿ ರಕ್ಷಣಾ ಪಡೆಯ ಬೋಟುಗಳು ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದವು.
‘ಸತತ ಕಾರ್ಯಾಚರಣೆ ಬಳಿಕ ನಾಪತ್ತೆಯಾದವರ ಪೈಕಿ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ, ಪ್ರೀತಂ ಎಂಬವರ ಮೃತದೇಹವು ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ತೆಯಾಗಿವೆ. ಮುಂದುವರಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಂಗ್ರೆಯ ಯುವಕ ಚಿಂತನ್ ಮೃತದೇಹವು ಸಂಜೆ 4 ಗಂಟೆ ಪತ್ತೆಯಾಗಿದೆ. ಸದ್ಯ ಮೂವರ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನು ಮೂವರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ’ ಎಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ಕುಮಾರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಮೀನುಗಾರಿಕಾ ಬಂದರ್‌ಗೆ ಡಿಸಿ ಭೇಟಿ
ಪರ್ಸಿನ್ ಮೀನುಗಾರಿಕೆ ದೋಣಿ ಮುಳುಗಿ ಮೂವರು ಮೃತಪಟ್ಟು, ಮೂವರು ನಾಪತ್ತೆಯಾದ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿದ್ದಾರೆ. ನಾಪತ್ತೆಯಾದ ಮೀನುಗಾರಾರ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಮಾತನಾಡಿದರು. ಬಳಿಕ ಮೀನುಗಾರಿಕಾ ಉಪನಿರ್ದೇಶಕರು ಹಾಗೂ ಕರಾವಳಿ ರಕ್ಷಣಾಪಡೆಯವರಿಗೆ ಶೋಧನಾ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.