ವಾಯುಭಾರ ಕುಸಿತ: ರಾಜ್ಯದಲ್ಲಿ ಡಿ.4ರಿಂದ ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು, ಡಿ.1: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ 24 ಗಂಟೆಯೊಳಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಡಿ.2 ಅಥವಾ 3ರಂದು ಕನ್ಯಾಕುಮಾರಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಇದರ ಪರಿಣಾಮ ರಾಜ್ಯದಲ್ಲಿ ಡಿ.4ರಿಂದ 2 ದಿನ ಭಾರಿ ಮಳೆಯಾಗಲಿದೆ. ಶ್ರೀಲಂಕಾದ ಟ್ರಿಂಕಾಮಲೆಯ 680 ಕಿಮೀ ದೂರದಲ್ಲಿ ಹಾಗೂ ಕನ್ಯಾಕುಮಾರಿಯ 1,090 ಕಿಮೀ ಅಂತರದಲ್ಲಿ ಸದ್ಯ ಮಾರುತಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಈ ಚಂಡಮಾರುತ ಸಂಭವಿಸಲಿದೆ. ಈಗಿನ ಮಾಹಿತಿಯಂತೆ ಈ ಚಂಡಮಾರುತ ದುರ್ಬಲವಾಗಿದ್ದರೂ ತಮಿಳುನಾಡು ಹಾಗೂ ಶ್ರೀಲಂಕಾ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತವು ಡಿ.2ರಂದು ಶ್ರೀಲಂಕಾ ಕರಾವಳಿ ದಾಟಲಿದೆ. ಇದರಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕೆಲವು ಭಾಗಗಳಲ್ಲಿ ಹೆಚ್ಚು ಮಳೆ ತರಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಅಲರ್ಟ್ ಸಹ ನೀಡಲಾಗಿದೆ. ಡಿ.4ರವರೆಗೆ ಚಂಡಮಾರುತ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರಿನಲ್ಲಿ ಡಿ.4ರಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ’. ಡಿ.5ರಂದು ಈ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಸದ್ಯ ಒಣಹವೆ ಮುಂದುವರಿದಿದೆ. ರಾಜ್ಯದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಡಿ.1ರಿಂದ ಡಿ.3ರವರೆಗೆ ಕೆಲ ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







