ಕೋವಿಡ್ ಲಸಿಕೆ ಪೂರೈಕೆಗೆ ತಯಾರಿ ಆರಂಭಿಸಲು ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು, ಡಿ.1: ಕೇಂದ್ರ ಸರಕಾರದ ಸಲಹೆ ಮೇರೆಗೆ ಕೋವಿಡ್–19 ಲಸಿಕೆ ಪೂರೈಕೆ, ವಿತರಣೆ ಹಾಗೂ ಆಡಳಿತ ನಿರ್ವಹಣೆ ತಯಾರಿ ಆರಂಭಿಸಲಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ಸರಕಾರದ ಸಂಪುಟ ಕಾರ್ಯದರ್ಶಿಗಳು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಕೋವಿಡ್ ಸಂಬಂಧಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಕೋವಿಡ್-19 ಲಸಿಕೆ ಬಗ್ಗೆ ಕೂಡ ಮಾತುಕತೆ ನಡೆದಿದೆ. ಬಳಿಕ ಇಲಾಖೆ ಹೊರಡಿಸಿರುವ ಹೇಳಿಕೆಯಲ್ಲಿ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸ್ಟೀರಿಂಗ್ ಸಮಿತಿ ಮತ್ತು ರಾಜ್ಯ ಕಾರ್ಯಪಡೆ ಲಸಿಕೆ ಸಂಗ್ರಹ ಮತ್ತು ಪೂರೈಕೆ ಬಗ್ಗೆ ಸಭೆ ನಡೆಸಿದೆ ಎಂದು ತಿಳಿಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆಯು ಪ್ರತಿ ಜಿಲ್ಲಾಧಿಕಾರಿಗಳಿಗೆ ಪತ್ರಗಳನ್ನು ರವಾನಿಸಿದ್ದು, ಬ್ಲಾಕ್ ಕಾರ್ಯಪಡೆ ಸಭೆಗಳನ್ನು ನಡೆಸುವಂತೆ ಆದೇಶಿಸಲಾಗಿದೆ. ಇದುವರೆಗೂ ಎರಡು ಲಕ್ಷದ 24 ಸಾವಿರದ 083 ಸರಕಾರಿ ಆರೋಗ್ಯ ಸೇವಾ ಕಾರ್ಯಕರ್ತರು ಹಾಗೂ 2.45 ಲಕ್ಷ ಖಾಸಗಿ ಆರೋಗ್ಯ ಸೇವಾ ಕಾರ್ಯಕರ್ತರು ಲಸಿಕೆಗೆ ದಾಖಲಾತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯ ಸರಕಾರದ 30 ಸಾವಿರಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಗುರುತಿಸಿದ್ದು, ಸರಕಾರಿ ಸ್ಥಾಪನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನು ಗುರುತಿಸಲಾಗಿದೆ ಮತ್ತು ಖಾಸಗಿ ಸೌಲಭ್ಯಗಳಿಂದ ಲಸಿಕೆ ಹಾಕುವವರನ್ನು ಗುರುತಿಸುವ ಪ್ರಕ್ರಿಯೆಯನ್ನು ಹಾಗೂ ಕೇಂದ್ರದ ಸೂಚನೆಯಂತೆ ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ.
ಇದುವರೆಗೂ 68,317 ಸರಕಾರ ಮತ್ತು 35,310 ಖಾಸಗಿ ಸಂಭಾವ್ಯ ವ್ಯಾಕ್ಸಿನೇಟರ್ ಗಳನ್ನು ಗುರುತಿಸಲಾಗಿದೆ. ಕೇಂದ್ರದಿಂದ ಸರಬರಾಜು ಮಾಡಲಾಗುತ್ತಿರುವ ಕೋಲ್ಡ್ ಚೈನ್ ಉಪಕರಣಗಳ ಸ್ಥಾಪನೆಗಾಗಿ ಸರಕುಗಳ ಪಟ್ಟಿಯನ್ನು ಅವರೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ. ಪಶುಸಂಗೋಪನಾ ವಿಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಲಭ್ಯತೆಯನ್ನು ಕೇಂದ್ರದೊಂದಿಗೆ ಹಂಚಿಕೊಳ್ಳಲಾಗಿದೆ. ಭಾರತದ ಆಹಾರ ನಿಗಮದಲ್ಲಿ ಲಭ್ಯವಿರುವ ಒಣ ಶೇಖರಣಾ ಸ್ಥಳವನ್ನು ಸಹ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







