ಹ್ಯಾಕರ್ ಶ್ರೀಕೃಷ್ಣ ಸಹಚರ ರಾಬಿನ್ ಬಂಧನ

ಬೆಂಗಳೂರು, ಡಿ.1: ಡಾರ್ಕ್ ವೆಬ್‍ನಲ್ಲಿ ಡ್ರಗ್ಸ್ ಖರೀದಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹ್ಯಾಕರ್ ಶ್ರೀಕೃಷ್ಣ ಸಹಚರ ರಾಬಿನ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಆರೋಪಿ ರಾಬಿನ್ ಬಿಟ್ ಕಾಯಿನ್ ದಂಧೆಯಲ್ಲಿ ತೊಡಗಿದ್ದು, ಈ ಇಬ್ಬರೂ ಸೇರಿ ಹಲವಾರು ಸರಕಾರಿ ವೆಬ್ ಸೈಟ್‍ಗಳನ್ನು ಹ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಕೊಲ್ಕತ್ತಾದವನಾಗಿದ್ದ ರಾಬಿನ್, ಮೂರು ವರ್ಷಗಳ ಹಿಂದೆ ಬಿಟ್ ಕಾಯಿನ್ ದಂಧೆಯಿಂದ ಹ್ಯಾಕರ್ ಶ್ರೀಕೃಷ್ಣಗೆ ಪರಿಚಯವಾಗಿದ್ದ. ಕಳೆದ ಆರು ತಿಂಗಳಿನಿಂದ ಒಂದೇ ಕಡೆಯಲ್ಲಿ ಇಬ್ಬರು ವಾಸವಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ನ್ಯಾಯಾಂಗ ಬಂಧನ
ಈ ಪ್ರಕರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕೃಷ್ಣಗೆ ನ್ಯಾಯಾಂಗ ಬಂಧನ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.
ಮಂಗಳವಾರ ಸಿಸಿಬಿ ಕಸ್ಟಡಿ ಅವಧಿ ಅಂತ್ಯವಾಗಿರುವ ಹಿನ್ನೆಲೆ ನ್ಯಾಯಾಲಯದ ಮುಂದೆ ಶ್ರೀ ಕೃಷ್ಣನನ್ನು ಸಿಸಿಬಿ ಅಧಿಕಾರಿಗಳು ಹಾಜರುಪಡಿಸಿ ಪುನಃ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ಕೋರಿದರು.
ಆರೋಪಿ ಪರ ವಕೀಲರು ಇದಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿ ಸಿದ್ದರು. ತದನಂತರ, ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಶ್ರೀಕೃಷ್ಣನಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.







