ಟ್ರಂಪ್‌ರ ವಿವಾದಿತ ಕೊರೋನ ಸಲಹೆಗಾರ ರಾಜೀನಾಮೆ

ವಾಶಿಂಗ್ಟನ್, ಡಿ. 1: ಮುಖಗವಸು ಧರಿಸುವುದನ್ನು ವಿರೋಧಿಸಿ ವಿವಾದಕ್ಕೀಡಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೆಚ್ಚಿನ ಕೊರೋನ ವೈರಸ್ ಸಲಹೆಗಾರ ಸ್ಕಾಟ್ ಅಟ್ಲಾಸ್ ರಾಜೀನಾಮೆ ನೀಡಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಸಾರ್ವಜನಿಕ ಆರೋಗ್ಯ ಅಥವಾ ಸಾಂಕ್ರಾಮಿಕ ರೋಗಗಳ ವಿಷಯದಲ್ಲಿ ಸಾಂದರ್ಭಿಕ ಅನುಭವ ಅಥವಾ ಅರ್ಹತೆಯ ಕೊರತೆ ಹೊಂದಿದ್ದ ಅಟ್ಲಾಸ್‌ರ ಸೇವಾ ಗುತ್ತಿಗೆಯ ಅವಧಿಯು ಈ ವಾರದ ಕೊನೆಯಲ್ಲಿ ಕೊನೆಗೊಳ್ಳಲಿತ್ತು ಎಂಬುದಾಗಿಯೂ ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.
ನಿರ್ಗಮನ ಅಧ್ಯಕ್ಷ ಟ್ರಂಪ್ ಜೊತೆಗೆ ಕೆಲಸ ಮಾಡಿದ ಹೆಚ್ಚಿನ ಅವಧಿಯಲ್ಲಿ ಅಟ್ಲಾಸ್ ವಿವಾದಕ್ಕೊಳಗಾಗಿದ್ದರು. ಕೋವಿಡ್-19 ಸೋಂಕು ಪ್ರಕರಣಗಳು ದೇಶಾದ್ಯಂತ ದಾಖಲೆಯ ಮಟ್ಟದಲ್ಲಿ ಹೆಚ್ಚುತ್ತಿರುವ ಸಮಯದಲ್ಲೇ ಅವರು ರಾಜೀನಾಮೆ ನೀಡಿದ್ದಾರೆ.
ಮುಖಗವಸು ಧರಿಸುವುದರಿಂದ ಪ್ರಯೋಜನವಿದೆ ಎಂಬ ಪ್ರಬಲ ವೈಜ್ಞಾನಿಕ ಪುರಾವೆಗಳ ಹೊರತಾಗಿಯೂ, ಅವರು ಅಕ್ಟೋಬರ್‌ನಲ್ಲಿ ‘‘ಮುಖಗವಸುಗಳಿಂದ ಪ್ರಯೋಜನವಿದೆಯೇ? ಇಲ್ಲ’’ ಎಂಬುದಾಗಿ ಟ್ವೀಟ್ ಮಾಡಿದ್ದರು.
Next Story