ದಾವೂದ್ ಇಬ್ರಾಹಿಂ ಕುಟುಂಬದ ರತ್ನಗಿರಿಯ ಸೊತ್ತು ಹರಾಜು

ಮುಂಬೈ, ಡಿ. 1: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಟುಂಬಕ್ಕೆ ಸೇರಿದ ರತ್ನಗಿರಿಯಲ್ಲಿರುವ ಎರಡು ನಿವೇಶನ ಹಾಗೂ ಕಟ್ಟಡವನ್ನು ಒಳಗೊಂಡ ಸೊತ್ತು ಮಂಗಳವಾರ 1.10 ಕೋಟಿ ರೂಪಾಯಿಗೆ ಹರಾಜಾಗಿದೆ.
ಎಸ್‌ಎಎಫ್‌ಇಎಂಎ ಕಾಯ್ದೆ ಅಡಿಯಲ್ಲಿ ಸಂಬಂಧಿತ ಪ್ರಾಧಿಕಾರ ಈ ಹರಾಜು ನಡೆಸಿದೆ. ಹರಾಜಿನಲ್ಲಿ ಇಬ್ಬರು ಬಿಡ್‌ದಾರರು ಪಾಲ್ಗೊಂಡಿದ್ದರು. ಒಬ್ಬರು ಬಿಡ್‌ದಾರರು ಕೆಲವು ತಾಂತ್ರಿಕ ಕಾರಣಕ್ಕಾಗಿ ತಮ್ಮ ಬಿಡ್ ಅನ್ನು ಹಿಂಪಡೆದುಕೊಂಡಿದ್ದರು.
ಮಾದಕ ದ್ರವ್ಯದ ದೊರೆ ದಿವಂಗತ ಇಕ್ಬಾಲ್ ಮಿರ್ಚಿಗೆ ಸೇರಿದ 3.45 ಕೋಟಿ ರೂಪಾಯಿ ಮೌಲ್ಯದ ಸಾಂತಾ ಕ್ರೂಜ್ ಪ್ಲಾಟ್ ಅನ್ನು ಖರೀದಿಸಲು ನಿರಂತರ ಎರಡನೇ ಬಾರಿ ಯಾವುದೇ ಬಿಡ್‌ದಾರರು ಆಸಕ್ತಿ ತೋರಿಸಿಲ್ಲ.
ದಾವೂದ್ ಇಬ್ರಾಹಿಂ ಅವರ ಸಂಬಂಧಿಕರ ಸೊತ್ತನ್ನು ರತ್ನಗಿರಿ ನಿವಾಸಿ ರವಿ ಕಾಟೆ ಖರೀದಿಸಿದರು.
ಮೂರು ಸೊತ್ತುಗಳಲ್ಲಿ ಒಂದು ಕಾರ್ಯಾಚರಣೆ ಸ್ಥಗಿತಗೊಂಡಿರುವ ಪೆಟ್ರೋಲ್ ಬಂಕ್. ಇದು ದಾವೂದ್ ಇಬ್ರಾಹಿಂನ ದಿವಂಗತ ಸಹೋದರಿ ಹಸೀನಾ ಪಾರ್ಕರ್ ಹೆಸರಲ್ಲಿ ಇದೆ. ದಾವೂದ್ ಇಬ್ರಾಹಿಂನ ಕುಟುಂಬಕ್ಕೆ ಸೇರಿದ ಈ ಮೂರು ಸೊತ್ತುಗಳ ಒಟ್ಟು ಸವಕಳಿ ಮೌಲ್ಯ 10.9 ಕೋಟಿ ರೂಪಾಯಿ. ಕಾಟೆ ಅವರು ಆರಂಭಿಕ ಮೊತ್ತವಾಗಿ 27.5 ಲಕ್ಷ ರೂಪಾಯಿ ಠೇವಣಿ ಇರಿಸಿದ್ದರು.
ಖೇಡ್‌ನ ಲೋಟೆ ಗ್ರಾಮದಲ್ಲಿ ಇರುವ ಈ ಸೊತ್ತುಗಳಲ್ಲಿ 28.6 ಲಕ್ಷ ಮೌಲ್ಯದ 30 ಗುಂಟೆ ಭೂಮಿ, 47.6 ಲಕ್ಷ ರೂಪಾಯಿ ಮೌಲ್ಯದ ಇನ್ನೊಂದು 50 ಗುಂಟೆ ಭೂಮಿ. 32.8 ಲಕ್ಷ ರೂಪಾಯಿ ಸವಕಳಿ ಮೌಲ್ಯದ ಕಟ್ಟಡವನ್ನು ಇದು ಒಳಗೊಂಡಿದೆ.







