ಮುಂಚೂಣಿ ನೆಲೆಯಲ್ಲಿ ಚಳಿಯ ಕಾರಣಕ್ಕೆ ಯೋಧರನ್ನು ಬದಲಾಯಿಸುತ್ತಿರುವ ಚೀನ ಸೇನೆ
ಹೊಸದಿಲ್ಲಿ, ಡಿ. 1: ಪೂರ್ವ ಲಡಾಖ್ ನ ಕಠಿಣ ಚಳಿ ತಡೆದುಕೊಳ್ಳಲು ಚೀನ ಸೈನಿಕರಿಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಅವರು ಮುಂಚೂಣಿ ನೆಲೆಯಲ್ಲಿ ಪ್ರತಿದಿನ ಬದಲಾಗುತ್ತಿರುವಂತೆ ಕಾಣುತ್ತಿದೆ. ಆದರೆ, ಇದೇ ಸ್ಥಳದಲ್ಲಿ ಭಾರತೀಯ ಯೋಧರು ದೀರ್ಘಾವಧಿ ಇರುತ್ತಾರೆ. ‘‘ವಾಸ್ತವ ಗಡಿ ನಿಯಂತ್ರಣ ರೇಖೆಯ ಮುಂಚೂಣಿ ನೆಲೆಯಲ್ಲಿ ನಮ್ಮ ಸೇನಾ ಪಡೆಯನ್ನು ನಿಯೋಜಿಸಲಾಗಿದೆ.
ಈ ಪ್ರದೇಶದಲ್ಲಿ ಚೀನಾ ಯೋಧರಿಗಿಂತ ನಮ್ಮ ಯೋಧರು ಹೆಚ್ಚು ಸಮಯ ಇರುತ್ತಾರೆ. ಕಠಿಣ ಚಳಿ ಹಾಗೂ ಅಂತಹ ತಾಪಮಾನಕ್ಕೆ ಒಡ್ಡಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಚೀನ ಸೇನೆ ಪ್ರತಿದಿನ ತಮ್ಮ ಯೋಧರನ್ನು ಬದಲಾಯಿಸುವ ಒತ್ತಾಯಕ್ಕೆ ಒಳಗಾಗುತ್ತಿದೆ’’ ಎಂದು ಸರಕಾರದ ಮೂಲಗಳು ತಿಳಿಸಿವೆ.
ಸಿಯಾಚಿನ್ ಹಿಮನದಿ ಅಥವಾ ಇತರ ಎತ್ತರ ಸ್ಥಾನಗಳು ಸೇರಿದಂತೆ ಲಡಾಕ್ ವಲಯದಲ್ಲಿ ನಮ್ಮ ಹೆಚ್ಚಿನ ಯೋಧರು ಈಗಾಗಲೇ ಕರ್ತವ್ಯ ನಿರ್ವಹಿಸಿರುವುದರಿಂದ ಅಲ್ಲಿನ ಹವಾಮಾನವನ್ನು ಎದುರಿಸುವ ವಿಷಯದಲ್ಲಿ ಭಾರತದ ಯೋಧರು ಚೀನಾ ಯೋಧರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಅದು ತಿಳಿಸಿದೆ. ಭಾರತೀಯ ನೆಲೆಗಳಿಗೆ ಸಮೀಪ ಚೀನಾ ತಮ್ಮ ಸೇನೆಯನ್ನು ನಿಯೋಜಿಸಿರುವ ವ್ಯೂಹಾತ್ಮಕ ಎತ್ತರದಲ್ಲಿ ಚಳಿಗಾಲದ ತೀವ್ರ ಪರಿಣಾಮ ಕಾಣಬಹುದು. ಭಾರತೀಯ ಯೋಧರು ಅಲ್ಲಿ ಗಸ್ತು ನಡೆಸುತ್ತಿರುತ್ತಾರೆ. ಆದರೆ, ಚೀನ ಪಡೆ ತನ್ನ ಯೋಧರನ್ನು ಪ್ರತಿದಿನ ಬದಲಾಯಿಸುತ್ತಿರುತ್ತದೆ ಎಂದು ಅವರು ಹೇಳಿದ್ದಾರೆ.