ಬಂಗಾಳ ಕೊಲ್ಲಿಯಲ್ಲಿ ನಿಮ್ನ ಭಾರ ಒತ್ತಡ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ: ಕೇರಳದಲ್ಲಿ ಆತಂಕ
ತಿರುವನಂತಪುರ, ಡಿ. 1: ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ನಿಮ್ನ ಭಾರ ಒತ್ತಡ ಮಂಗಳವಾರ ರಾತ್ರಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತ ಬುಧವಾರ ಶ್ರೀಲಂಕಾ ಕರಾವಳಿಯನ್ನು ಹಾದು ಹೋಗುವ ಹಾಗೂ ಗುರುವಾರ ಬೆಳಗ್ಗೆ ಕನ್ಯಾಕುಮಾರಿಯನ್ನು ತಲಪುವ ಸಾಧ್ಯತೆ ಇದೆ.
ಚಂಡಮಾರುತದ ಪಥ ಇಂದು ರಾತ್ರಿ ಖಚಿತವಾಗಿ ತಿಳಿಯುವುದರಿಂದ ಕೇರಳದಲ್ಲಿ ಆತಂಕ ಮನೆ ಮಾಡಿದೆ. ಚಂಡಮಾರುತದ ಪರಿಣಾಮ ಕೇರಳದಲ್ಲಿ ಭಾರೀ ಮಳೆ ಸುರಿಯಲಿದೆ. ಬಿರುಗಾಳಿ ಬೀಸಲಿದೆ. ಸಮದ್ರದ ಪ್ರಕ್ಷುಬ್ದಗೊಳ್ಳಲಿದೆ. ಈ ಚಂಡಮಾರುತ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಚಂಡಮಾರುತವನ್ನು ಎದುರಿಸಲು ರಾಜ್ಯ ಸಿದ್ದವಾಗಿದೆ.
ದುರ್ಬಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಗುರುತಿಸಲು ಹಾಗೂ ಅಗತ್ಯ ಇದ್ದರೆ, ಅವರನ್ನು ಅಲ್ಲಿಂದ ಪರಿಹಾರ ಕೇಂದ್ರಗಳಿಗೆ ವರ್ಗಾಯಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದ್ದಾರೆ. ಬಂಗಾಳಕೊಲ್ಲಿಯ ಈಶಾನ್ಯ ಹಾಗೂ ಸಮೀಪದ ನೈಋತ್ಯದಲ್ಲಿ ನಿಮ್ನ ಭಾರ ಒತ್ತಡ ಪಶ್ಚಿಮದತ್ತ ಗಂಟೆಗೆ 11 ಕಿ.ಮೀ. ವೇಗದಲ್ಲಿ ಕಳೆದ 6 ಗಂಟೆಗಳಿಂದ ಸಾಗುತ್ತಿದೆ. ಈಗ ಅದು ಟ್ರಿಂಕೋಮಾಲಿ (ಶ್ರೀಲಂಕಾ)ಯ 500 ಕಿ.ಮೀ. ಪೂರ್ವ ಆಗ್ನೇಯ ಹಾಗೂ ಕನ್ಯಾಕುಮಾರಿಯ 900 ಕಿ.ಮೀ. ಪಶ್ಚಿಮ ಆಗ್ನೇಯದಲ್ಲಿ ಕೇಂದ್ರವನ್ನು ಹೊಂದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಕೆ. ಸಂತೋಷ್ ಕುಮಾರ್ ಹೇಳಿದ್ದಾರೆ.







